ಕೊರೋನಾಗೆ ಮತ್ತೋರ್ವ ಶಿಕ್ಷಕ ಸಾವು: ಕಂಬನಿ ಮಿಡಿಯುತ್ತಿರುವ ಶಿಕ್ಷಕ ಸಮೂಹ
1 min readಬಾಗಲಕೋಟೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರೋರ್ವರು ಕೊರೋನಾ ವೈರಸ್ ತಗುಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಶಿಕ್ಷಕ ಸಮೂಹ ಆತಂಕಕ್ಕೆ ಒಳಗಾಗಿದೆ.
ನೀರಲಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಜೆ.ಎಸ್.ಚವ್ಹಾಣ ಎಂಬ ಶಿಕ್ಷಕರೇ ಕೊರೋನಾ ಪಾಸಿಟಿವ್ ನಿಂದ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಸುಮಾರು ಹತ್ತು ವರ್ಷಗಳಿಂದ ಶಿಕ್ಷಕ ಜೆ.ಎಸ್.ಚವ್ಹಾಣ, ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿ ಬಸವನಕೊಪ್ಪ ಸರಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಕ್ಟೋಬರ್ 2019 ರಲ್ಲಿ ಪರಸ್ಪರ ವರ್ಗಾವಣೆ ಮೂಲಕ ನೀರಲಕೇರಿಯ ಸರಕಾರಿ ಪ್ರಾಥಮಿಕ ಶಾಲೆಗೆ ಬಂದಿದ್ದರು.
ಸಹಶಿಕ್ಷಕ ಚವ್ಹಾಣನವರ ಸಾವಿಗೆ ನೀರಲಕೇರಿ ಸರಕಾರಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ತೀವ್ರ ಕಂಬನಿ ಮಿಡಿದಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗ ನಗರದ ಶಿಕ್ಷಕಿ ವತ್ಸಲಾ, ವಿದ್ಯಾಗಮ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅನಾರೋಗ್ಯಕ್ಕೆ ಒಳಗಾಗಿ, ನಂತರ ಸಾವಿಗೀಡಾದ ವಿಷಯ ಇನ್ನೂ ಹಸಿರುವಾಗಲೇ, ಮತ್ತೋರ್ವ ಶಿಕ್ಷಕ ಕೊರೋನಾಗೆ ಬಲಿಯಾಗಿರುವುದು ದುರಂತವೇ ಸರಿ.