ಕರ್ನಾಟಕ ಮೇಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ಗೆ ಜಾಗ ಮಂಜೂರು: ಸಚಿವ ಜಗದೀಶ ಶೆಟ್ಟರ್
ಬೆಂಗಳೂರು: ಹುಬ್ಬಳ್ಳಿಯ ಕರ್ನಾಟಕ ಮೇಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ಗೆ ಗುರುತಿಸಲಾಗಿರುವ ಜಾಗವನ್ನು 99 ವರ್ಷಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಬೆಂಗಳೂರಿನ ಖನಿಜ ಭವನದ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಸಿಲ್ವರ್ ಜ್ಯೂಬಲಿಯನ್ನು ಆಚರಿಸಿಕೊಳ್ಳುತ್ತಿರುವ ಕರ್ನಾಟಕ ಮೇಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಕೊಳ್ಳುವ ನಿಟ್ಟಿನಲ್ಲಿ ನಿವೇಶನದ ಅವಶ್ಯಕತೆ ಇದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಕೇಂದ್ರ ಹಾಗೂ ರಾಜ್ಯದಿಂದ ಅನುದಾನಿತ ಸಂಸ್ಥೆಗೆ ಜಾಗವನ್ನು ನೀಡುವ ಬಗ್ಗೆ ನಿರಾಪೇಕ್ಷಣಾ ಪತ್ರವನ್ನು ನೀಡಲಾಗಿರುವುದಿಲ್ಲ ಎಂದು ಸಂಸ್ಥೆಯ ಪದಾಧಿಕಾರಿಗಳು ಸಚಿವರಿಗೆ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಎಮ್ ಎಸ್ ಎಂ ಇ ಹಾಗೂ ಗಣಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂಸ್ಥೆಗೆ ಗುರುತಿಸಲಾಗಿರುವ ಜಾಗವನ್ನು ಮುಂದಿನ 99 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶಿರೂರ್, ಕರ್ನಾಟಕ ಮೇಟೀರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ನ ಪರೀವಿಕ್ಷಣಾ ಕೇಂದ್ರದ ಅಧ್ಯಕ್ಷರಾದ ಟಿ ನಾಗರಾಜ ಡ್ಯೂಟಿ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಜಾಡರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ಕುಲಕರ್ಣಿ ಭಾಗವಹಿಸಿದ್ದರು.