ಹೆಣ್ಮಕ್ಕಳೇ ಸ್ಟ್ರಾಂಗೂ ಗುರು: ಗ್ರಾಮೀಣ ಶಿಕ್ಷಕರ ಸಂಘದಲ್ಲಿ ಶಿಕ್ಷಕಿಯರಿಗೆ ಆಧ್ಯತೆ
1 min readಹುಬ್ಬಳ್ಳಿ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಬ್ಬಳ್ಳಿ ಘಟಕಕ್ಕೆ ಮಹಿಳೆಯರಿಗೆ ಅವಕಾಶವನ್ನ ನೀಡಲಾಗಿದ್ದು, ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನ ಅವರಿಗೆ ನೀಡುವ ಮೂಲಕ, ಗ್ರಾಮೀಣ ಸಂಘವೂ ಮಹಿಳೆಯರಿಗೂ ಪ್ರಮುಖವಾದ ಸ್ಥಾನ ನೀಡಿದೆ.
ಹುಬ್ಬಳ್ಳಿ ತಾಲೂಕಿನ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಮುಖ ಹುದ್ದೆಗಳಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಎರಡೂ ಹುದ್ದೆಗಳು ಮಹಿಳೆಯರ ಪಾಲಾಗಿದ್ದು, ಇದು ಹುಬ್ಬಳ್ಳಿ ತಾಲೂಕಿನ ಮಹಿಳಾ ಶಿಕ್ಷಕಿಯರಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ.
ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷರಾಗಿ ಛಬ್ಬಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವೀಣಾ ಜಿ ಶೇಠ, ಪ್ರಧಾನ ಕಾರ್ಯದರ್ಶಿಯಾಗಿ ನವನಗರ ಕೆಪಿಎಸ್ ಶಾಲೆಯ ಶಿಕ್ಷಕಿ ಗೀತಾ ಇಟಗಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ರಾಜ್ಯ ಗೌರವಾಧ್ಯಕ್ಷ ಎಲ್.ಐ.ಲಕ್ಕಮ್ಮನವರ, ಧಾರವಾಡ ಜಿಲ್ಲಾ ಅಧ್ಯಕ್ಷ ಅಕ್ಬರಲಿ ಸೋಲಾಪುರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜೀವಸಿಂಗ ಹಲವಾಯಿ, ಅನಸೂಯಾ ಸಜ್ಜನ ಉಪಸ್ಥಿತರಿದ್ದರು.
ಅಧಿಕಾರ ವಹಿಸಿಕೊಂಡ ವೀಣಾ ಶೇಠ ಮಾತನಾಡಿ, ಹಳ್ಳಿಯಲ್ಲಿ ಕೆಲಸ ಮಾಡುವ ಬಹುತೇಕ ಶಿಕ್ಷಕರು ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುತ್ತಾರೆ. ವರ್ಗಾವಣೆ ಸಮಸ್ಯೆ, ಎಸ್ ಡಿ ಎಂ,ಸಿ ಅವರಿಂದ ತೊಂದರೆ ಬಸ್ಸಿನ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳ ನಡುವೆ ಕೆಲಸ ಮಾಡಬೇಕು. ಆದ್ದರಿಂದ, ಗ್ರಾಮೀಣ ಶಿಕ್ಷಕರಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಗುವುದೆಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಗೀತಾ ಇಟಗಿ ಮಾತನಾಡಿ, ಹಳ್ಳಿಯಲ್ಲಿ ಕೆಲಸ ಮಾಡುವ ಗ್ರಾಮೀಣ ಶಿಕ್ಷಕರ ಸಂಘ ಯಾರ ವಿರುದ್ಧ ಅಥವಾ ಪರವಾಗಿ ಇರುವುದಿಲ್ಲ. ಇದು ಸಮಸ್ತ ಗ್ರಾಮೀಣ ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುವ ಸಲುವಾಗಿ ಹುಟ್ಟಿಕೊಂಡ ಸಂಘವಾಗಿದೆ. ಗ್ರಾಮೀಣ ಶಿಕ್ಷಕರಿಗೆ ಗ್ರಾಮೀಣ ಭತ್ಯೆ ಕೊಡಬೇಕು ಗ್ರಾಮೀಣ ಶಾಲೆಗಳಿಗೆ ಹೋಗಲು ಬರಲು ಸರಿಯಾಗಿ ಬಸ್ಸಿನ ವ್ಯವಸ್ತೆ ಆಗಬೇಕಿದೆ ಎಂದರು.