ಸಿಎಂ ಹೇಳಿದರೂ ನಡೆಯದ ಶಿಕ್ಷಕರ ವರ್ಗಾವಣೆ: ವೇಳಾಪಟ್ಟಿ ಪ್ರಕಟಿಸುವಂತೆ ಷಡಕ್ಷರಿ ಒತ್ತಾಯ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶಿಕ್ಷಣ ಇಲಾಖೆ ಆಯುಕ್ತರಿಗೆ ಬೇಗನೇ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಹೇಳಿದರೂ, ಇಲ್ಲಿಯವರೆಗೆ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಿದಿರುವುದನ್ನ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರ ಸೂಚಿಸಿರುವಂತೆ ನೂತನವಾಗಿ ಜಾರಿಗೆ ಬಂದಿರುವ ಶಿಕ್ಷಕರ ವರ್ಗಾವಣೆ ಕಾಯ್ದೆಯನ್ವಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯನ್ನು ಪೂರ್ಣಗೊಳಿಸುವ ಸಲುವಾಗಿ ವೇಳಾಪಟ್ಟಿ ಪ್ರಕಟಿಸಬೇಕು. ಕಳೆದ ಸಾಲಿನಲ್ಲಿ ಕೆಲವು ಶಿಕ್ಷಕರು ಕಡ್ಡಾಯ/ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದು, ಅಂತಹ ಶಿಕ್ಷಕರಿಗೆ ನೆರವಾಗುವ ಉದ್ದೇಶದಿಂದ ನೂತನ ವರ್ಗಾವಣೆ ಕಾಯ್ದೆಯಲ್ಲಿ ವರ್ಗಾವಣೆಗೆ ಅವಕಾಶ ಕಲ್ಪಿಸಿರುವಂತೆ ಪ್ರಸಕ್ತ ಸಾಲಿನ ವರ್ಗಾವಣೆಗೂ ಮುನ್ನಾ ಖಾಲಿ ಹುದ್ದೆ ಲಭ್ಯತೆ ಅನುಸಾರ ಅವರು ಬಯಸುವ ಸ್ಥಳಗಳಿಗೆ ವರ್ಗಾವಣೆ ಮಾಡುವುದು ಸೇರಿದಂತೆ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಭೋಧಕೇತರ ಸಿಬ್ಬಂದಿ ವರ್ಗದವರ ಮುಂಬಡ್ತಿ ಬೇಡಿಕೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘಧ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯಕ್ತರನ್ನು ಭೇಟಿ ಮಾಡಿ ಶಿಕ್ಷಕರು, ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಿದರು. ಪ್ರಸಕ್ತ ಸಾಲಿನ ವರ್ಗಾವಣೆ ಪ್ರಾರಂಭಿಸುವ ಪೂರ್ವದಲ್ಲಿ ಅವಧಿ ಪೂರ್ಣಗೊಳಿಸಿದ ಸಿ.ಆರ್.ಪಿ ಮತ್ತು ಬಿ.ಆರ್.ಪಿ ಗಳಿಗೆ ಜಿಲ್ಲೆಯಲ್ಲಿ ಖಾಲಿಯಿರುವ ಯಾವುದಾದರೊಂದು ತಾಲ್ಲೂಕಿಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರ ಜ್ಯೇಷ್ಠತಾ ಪಟ್ಟಿಯನ್ನು ಶೀಘ್ರ ಅಂತಿಮಗೊಳಿಸಿ ಪದೋನ್ನತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸೇರಿದಂತೆ ಬೆಂಗಳೂರು ವಿಭಾಗದ ಮಾದರಿಯಲ್ಲಿ ಮೈಸೂರು ವಿಭಾಗದ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ವೃಂದಕ್ಕೆ ಪದೋನ್ನತಿ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.
ಬೆಂಗಳೂರು ವಿಭಾಗ ವ್ಯಾಪ್ತಿಯ ಪ್ರೌಢಶಾಲಾ ಸಹಶಿಕ್ಷಕರಿಗೆ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಮುಖ್ಯ ಶಿಕ್ಷಕರ ಹುದ್ದೆಗೆ ಪದೋನ್ನತಿ ನೀಡಲಾಗಿದ್ದು, ಪದೋನ್ನತಿ ನಿರಾಕರಿಸಿ ಸ್ಥಳ ಆಯ್ಕೆ ಮಾಡಿಕೊಳ್ಳದೆ ಉಳಿದಿರುವ ಸುಮಾರು 70 ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಅರ್ಹ ಸಹ ಶಿಕ್ಷಕರನ್ನು ಪರಿಗಣಿಸಿ ಪದೋನ್ನತಿ ನೀಡುವಂತೆ ಒತ್ತಾಯಿಸಿದರು.
ರಾಜ್ಯಾಧ್ಯಕ್ಷರ ಮನವಿಗೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಆಯುಕ್ತರು ಆದಷ್ಟು ಬೇಗ ಉಳಿದಿರುವ 70 ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಕೌನ್ಸಿಲಿಂಗ್ ಕರೆಯಲಾಗುವುದು, ಶಿಕ್ಷಕರ ವರ್ಗಾವಣೆಗಾಗಿ 2-3 ದಿನದೊಳಗಾಗಿ ವೇಳಾಪಟ್ಟಿಯನ್ನು ಪ್ರಕಟಿಸುವುದು ಹಾಗೂ ಮೈಸೂರು ವಿಭಾಗ ಪದೋನ್ನತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಇದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು, ಅವಧಿ ಪೂರ್ಣಗೊಳಿಸಿದ ಸಿ.ಆರ್.ಪಿ/ಬಿ.ಆರ್.ಪಿ ಗಳಿಗೆ ಅನುಕೂಲ ಕಲ್ಪಿಸುವುದು ಸೇರಿದಂತೆ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಭೋಧಕೇತರ ಸಿಬ್ಬಂದಿ ವರ್ಗದವರಿಗೆ ಮುಂಬಡ್ತಿ ನೀಡುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಕೋಶಾಧ್ಯಕ್ಷ ಆರ್.ಶ್ರೀನಿವಾಸ್, ಗೌರವಾಧ್ಯಕ್ಷ ವಿವಿ. ಶಿವರುದ್ರಯ್ಯ ಹಾಗೂ ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್‍ಕುಮಾರ್ ಉಪಸ್ಥಿತರಿದ್ದರು.