ಸ್ವಂತ ಹಣದಿಂದ ಸರಕಾರಿ ಶಾಲೆಗೆ ಜೀವಕಳೆ ತಂದ ಶಿಕ್ಷಕ…!
1 min readಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಕಳೆಗುಂದಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರೂಪವನ್ನ ಬದಲಿ ಮಾಡುವಲ್ಲಿ ಶಿಕ್ಷಕ ಸದಾಶಿವ ಪತ್ತಾರ ಯಶಸ್ವಿಯಾಗಿದ್ದು, ತಮ್ಮದೇ 60 ಸಾವಿರ ರೂಪಾಯಿ ಖರ್ಚು ಮಾಡಿ ಇತರರಿಗೂ ಮಾದರಿಯಾಗುವಂತ ಕಾರ್ಯವನ್ನ ಮಾಡಿದ್ದಾರೆ.
ಶಾಲೆ ಹೆಂಗಾಗಿದೆ ನೋಡಿ…
ಶಿಕ್ಷಕ ಸದಾಶಿವ ಅವರು ಪಾಠ ಮಾಡುವ ಕಾಯಕಕ್ಕೆ ಸೀಮಿತಗೊಳ್ಳದೇ ಶಾಲೆ ಆವರಣದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನ ಗ್ರಾಮಸ್ಥರ ನೆರವಿನಿಂದ ತೆರವುಗೊಳಿಸಿದ್ದಾರೆ. ಎರಡು ಕೊಠಡಿಗಳಿರುವ ಶಾಲೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲ. 1ರಿಂದ 5ನೇ ತರಗತಿಯವರೆಗೆ 83 ವಿದ್ಯಾರ್ಥಿಗಳು ಓದುತ್ತಾರೆ. ಇದೇ ಶಾಲೆಯಲ್ಲಿ ಕಳೆದ ಹತ್ತು ವರ್ಷದಿಂದ ಸದಾಶಿವ ಪತ್ತಾರ ಶಿಕ್ಷಕರಾಗಿದ್ದಾರೆ.
ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಶಾಲೆ ಬಂದಾಗಿದ್ದರೂ ಕೂಡಾ, ಶಾಲೆಗೆ ಬಂದು ಸ್ವಂತ ಹಣದಿಂದ ಶಾಲೆಗೆ ಸುಣ್ಣ-ಬಣ್ಣ ಮಾಡಿಸಿದ್ದಾರೆ ಎಂದು ಹೇಳಿರುವ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ ಕುನ್ನೂರ, ಪತ್ತಾರ ಅವರ ಶಿಕ್ಷಣ ಪ್ರೇಮವನ್ನ ಮೆಚ್ಚಿದ್ದಾರೆ.
ಶಿಕ್ಷಕ ಸದಾಶಿವ ಪತ್ತಾರ ಅವರಿಗೆ ಶಾಲೆಯ ಕೋಣೆಯಲ್ಲಿ ಸ್ಮಾರ್ಟ್ ಕ್ಲಾಸ್ ಆಗಿಸುವ ಕನಸನ್ನ ಹೊಂದಿದ್ದಾರೆ. ಅದಕ್ಕಾಗಿ ಶಾಲೆಯ ವಿದ್ಯಾರ್ಥಿಗಳನ್ನ ಹಾಗೂ ದಾನಿಗಳನ್ನ ಹುಡುಕುತ್ತಿದ್ದಾರೆ. ಇಂತಹ ಶಿಕ್ಷಣ ಪ್ರೇಮಿಗೆ ನೀವೇನಾದರೂ ಸಹಾಯ ಮಾಡಿದ್ರೇ, 83 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.