ಶಿಕ್ಷಕ ‘ಅಲ್ಲಾಭಕ್ಷ”ರ ‘ಗಣೇಶ ಪ್ರೇಮ: ಮಾದರಿ ನಡೆಗೆ ಎಲ್ಲೆಡೆ ಮೆಚ್ಚುಗೆ…

ಚಿಕ್ಕೋಡಿ: ಗಣೇಶನ ಹಬ್ಬ ಹಿಂದೂಗಳ ಪವಿತ್ರ ಹಬ್ಬ. ಹಿಂದೂಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಗಣಪತಿ ಹಬ್ಬ ಬಂದರೆ ಸಾಕು ಇಡೀ ದೇಶವೇ ವಿಜೃಂಭಣೆಯಿಂದ ಆಚರಿಸುತ್ತದೆ. ಆದರೆ ಈ ಹಬ್ಬಕ್ಕೆ ಇಲ್ಲೊಂದು ಮುಸ್ಲಿಂ ಕುಟುಂಬ ಗಣೇಶನ ವಿಗ್ರಹವನ್ನು ತಯಾರಿಸಿ ಹಿಂದೂಗಳಿಗೆ ನೀಡುವ ಮೂಲಕ ಭಾವೈಕ್ಯತೆ ಮೆರೆದಿದೆ. ಇವರ ಈ ಕೆಲಸ ಸುತ್ತಮುತ್ತಲಿನ ಹಳ್ಳಿಗಳ ಜನರ ಗಮನ ಸೆಳೆದಿದೆ. ಅಷ್ಟಕ್ಕೂ ಆ ಕುಟುಂಬದ ಬಗ್ಗೆ ಮಾಹಿತಿ ಬೇಕಾ.. ಇಲ್ಲಿದೆ ನೋಡಿ.. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಮುಸ್ಲಿಂ ಸಮುದಾಯದ ಅಲ್ಲಾಭಕ್ಷ ಜಮಾದಾರ ಹಾಗೂ ಅವರ ಕುಟುಂಬಸ್ಥರು ಕಳೆದ 3 ತಲೆಮಾರುಗಳಿಂದ ಈ ಗಣೇಶನ ಮೂರ್ತಿಗಳನ್ನುತಯಾರಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಮಾಂಜರಿವಾಡಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಧರ್ಮದವರು ಸಹೋದರರಂತೆ ಬಾಳುತ್ತಿದ್ದಾರೆ. ಹಿಂದೂಗಳ ಕಾರ್ಯಕ್ರಮದಲ್ಲಿ ಮುಸ್ಲಿಮರು ಪಾಲ್ಗೊಂಡರೆ, ಮುಸ್ಲಿಂರ ಕಾರ್ಯಕ್ರಮದಲ್ಲಿ ಹಿಂದೂಗಳು ಪಾಲ್ಗೊಂಡು ಭಾವೈಕ್ಯತೆ ಮೆರೆಯುತ್ತಾರೆ. ಇದಕ್ಕೆ ಪುಷ್ಢಿನೀಡುವಂತೆ.. ಮುಸ್ಲೀಮರು ತಯಾರಿಸುವ ಗಣೇಶನ ವಿಗ್ರಹಗಳನ್ನು ಹಿಂದೂಗಳು ಗಣೇಶನ ಹಬ್ಬದ ದಿನದಂದು ಭಕ್ತಿಯಿಂದ ಪೂಜಿಸುತ್ತಾರೆ.

ಅಲ್ಲಾಭಕ್ಷ್ ಕುಟುಂಬಸ್ಥರು ಪ್ರತಿ ವರ್ಷ ಸುಮಾರು 400 ಕ್ಕಿಂತ ಹೆಚ್ಚು ಗಣೇಶನ ವಿಗ್ರಹವನ್ನು ತಯಾರಿಸುತ್ತಾರೆ. ಇನ್ನು ವೃತ್ತಿಯಲ್ಲಿ ಶಿಕ್ಷಕರಾದ ಅಲ್ಲಾಬಕ್ಷ್ ತಮ್ಮ ಬಿಡುವಿನ ಸಮಯಯದಲ್ಲಿ ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶನನ್ನು ತಯಾರಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ಇವರು ದುಡ್ಡಿನ ಆಸೆಗಾಗಿ ಈ ಮೂರ್ತಿ ಗಳನ್ನು ತಯಾರಿಸುವುದಿಲ್ಲವಂತೆ. ಭಕ್ತರು ತಮ್ಮ ಕೈಲಾದಷ್ಡು ದವಸ ಧಾನ್ಯಗಳನ್ನು ನೀಡಿ ಗಣೇಶ ಮೂರ್ತಿಗಳನ್ನು ಕೊಂಡೊಯ್ಯಬಹುದು. ಮಾಂಜರಿವಾಡಿಯ ಎಲ್ಲಾ ಗ್ರಾಮಸ್ಥರು ಅಲ್ಲಾಭಕ್ಷ ಕುಟುಂಬಸ್ಥರು ತಯಾರಿಸುವ ಗಣೇಶ ಮೂರ್ತಿಗಳನ್ನು ಒಯ್ಯುತ್ತಾರೆ. ಇದು ಹಿಂದೂ ಮುಸ್ಲಿಂ ಧರ್ಮಗಳ ಭಾವೈಕ್ಯತೆಯ ಸಂಕೇತವಾಗಿದೆ ಎನ್ನುತ್ತಾರೆ ಅಲ್ಲಾಭಕ್ಷ ಕುಟುಂಬಸ್ಥರು.