Posts Slider

Karnataka Voice

Latest Kannada News

ನೀವೂ ಧಾರವಾಡ ಜಿಲ್ಲೆಯ ಶಿಕ್ಷಕರಾ…!? ಹಾಗಾದ್ರೇ ‘ಜಿಲ್ಲಾಧಿಕಾರಿ’ ದಿವ್ಯ ಪ್ರಭು ಮಾತು ಕೇಳಲೇಬೇಕು…!!!

1 min read
Spread the love

ಪರೀಕ್ಷಾ ಫಲಿತಾಂಶ ಸುಧಾರಣೆಯಲ್ಲಿ ಮುಖ್ಯಶಿಕ್ಷಕರ ಮತ್ತು ಪಾಲಕರ ಪಾತ್ರ ಮುಖ್ಯವಾಗಿದೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ: ಎಸ್.ಎಸ್.ಎಲ್.ಸಿ ಪರೀಕ್ಷೆಯು ಮಕ್ಕಳ ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಘಟ್ಟ. ಕಳೆದ ಸಾಲಿನ ಪರೀಕ್ಷಾ ಫಲಿತಾಂಶ ಕಡಿಮೆ ಆಗಿದ್ದು, ಶೇ 74.85 ರಷ್ಟು ಫಲಿತಾಂಶ ಬಂದಿದೆ. ಇದನ್ನು ಸುಧಾರಿಸಿ ಶೇ 100 ರಷ್ಟು ಮಾಡುವಲ್ಲಿ ವಿದ್ಯಾರ್ಥಿಗಳ ಪಾಲಕರ ಮತ್ತು ಶಾಲಾ ಮುಖ್ಯಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಮಿಷನ್ ವಿದ್ಯಾಕಾಶಿ ಯೋಜನೆ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಶಿಕ್ಷಕರು ಕೇಳಲೇಬೇಕಾದ

ಮಾತುಗಳು ಇಲ್ಲಿವೆ ಕೇಳಿ…

ಅವರು ಇಂದು ಬೆಳಿಗ್ಗೆ ಜೆ.ಎಸ್.ಎಸ್. ಕಾಲೇಜು ಆವರಣದ ಸನ್ನಿಧಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ಪ್ರೌಢಶಾಲೆ ಮುಖ್ಯ ಶಿಕ್ಷಕರ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ವೀಡಿಯೋ

ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ, ಸಂವಹನ ಹಾಗೂ ಶಾಲಾ ಆಡಳಿತದ ತಜ್ಞರನ್ನು ಒಳಗೊಂಡ ಸಮಿತಿಗಳನ್ನು ರಚಿಸಿ, ಕಳೆದ ಎರಡು ತಿಂಗಳಿಂದ ಮಿಷನ್ ವಿದ್ಯಾಕಾಶಿ 2024-25 ರ ಯೋಜನೆಯಡಿ ವಿವಿಧ ಕ್ರಮಗಳನ್ನು ರೂಪಿಸಲಾಗುತ್ತಿದೆ. ಮಿಷನ್ ವಿದ್ಯಾಕಾಶಿ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.

ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಳ ಮಾಡುವಲ್ಲಿ ಪ್ರತಿ ಮಗು ತಪ್ಪದೆ ಶಾಲೆಗೆ ಬರಬೇಕು. ಪ್ರತಿ ಮಗುವಿಗೆ ವೈಯಕ್ತಿಕ ಕಾಳಜಿ, ಕಳಕಳಿ ಅಗತ್ಯವಿದೆ. ಶಿಕ್ಷಕರು ಪಠ್ಯ ಪೂರ್ಣಗೊಳಿಸುವ ಕಾರ್ಯಕ್ಕೆ ಕಟ್ಟು ಬೀಳದೆ; ವಿದ್ಯಾರ್ಥಿಯಲ್ಲಿ ಓದುವ, ಬರೆಯುವ ಅಭಿರುಚಿ ಬೆಳೆಸಬೇಕೆಂದು ಅವರು ಹೇಳಿದರು.

ಜಿಲ್ಲೆಯ ಎಸ್.ಎಸ್.ಎಲ್.ಸಿ ಶೈಕ್ಷಣಿಕ ಸುಧಾರಣೆಯಲ್ಲಿ ಶಾಲಾ ಮುಖ್ಯಸ್ಥರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಎಲ್ಲ ಶಾಲಾ ಮುಖ್ಯಸ್ಥರು ಪ್ರತಿ ದಿನ ತಪ್ಪದೇ ನಿಗಧಿತ ಸಮಯಕ್ಕೆ ಶಾಲೆಯಲ್ಲಿ ಹಾಜರಿದ್ದು, ಶಿಕ್ಷಕರ ಪಾಠ, ವಿದ್ಯಾರ್ಥಿಗಳ ಕಲಿಕೆ ಪರಿಶೀಲಿಸಬೇಕು. ಶಾಲೆಯ ಮೇಲುಸ್ತುವಾರಿವಹಿಸಬೇಕು. ಮುಂದಿನ 2024-25 ನೇ ಸಾಲಿನಲ್ಲಿ ನಿರೀಕ್ಷಿತ ಫಲಿತಾಂಶ ಬರದಿದಲ್ಲಿ ಶಾಲಾವಾರು ಕಾರಣಗಳನ್ನು ಅಧ್ಯಯನ ಮಾಡಿ, ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಫಲಿತಾಂಶ ಬದಲಾವಣೆಗೆ ಪ್ರೀತಿಯಿಂದ ಪಾಲ್ಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಇತರ ಇಲಾಖೆಯ ನೊಡಲ್ ನೇಮಕ: ಜಿಲ್ಲೆಯ ಪ್ರತಿ ಪ್ರೌಢಶಾಲೆಗೆ ಮಿಷನ್ ಯೋಜನೆಯಡಿ ನೀಡಿರುವ ಕಾರ್ಯಗಳು ನಿಯಮಿತವಾಗಿ ನಡೆಯುವಂತೆ ನಿಗಾವಹಿಸಲು ಮತ್ತು ಶಾಲೆಗೆ ಸಹಕಾರ ನೀಡಲು ಬೇರೆ ಬೇರೆ ಇಲಾಖೆಯ ಒರ್ವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಶಾಲಾ ನೊಡಲ್ ಎಂದು ನೇಮಕ ಮಾಡಲಾಗುತ್ತದೆ. ಪ್ರತಿ 15 ದಿನಕೊಮ್ಮೆ ನೊಡಲ್ ಅಧಿಕಾರಿಯಿಂದ ಶಾಲಾ ಶೈಕ್ಷಣಿಕ ಸುಧಾರಣೆ, ಮಕ್ಕಳ ಹಾಜರಾತಿ ಕುರಿತು ನೇರವಾಗಿ ವರದಿ ಪಡೆಯಲಾಗುತ್ತದೆ. ಪ್ರತಿಯೊಬ್ಬ ಮುಖ್ಯ ಶಿಕ್ಷಕ, ಸಹ ಶಿಕ್ಷಕ ಈ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಗೈರು ಹಾಜರಿ ತಪ್ಪಸಿ: ಶಾಲಾ ಸುಧಾರಣಾ ಸಮಿತಿಯವರು ತಮ್ಮ ಗ್ರಾಮದ ಪ್ರತಿ ಮಗು ಶಾಲೆಯಲ್ಲಿ ಇರುವಂತೆ ಕಾಳಜಿವಹಿಸಬೇಕು. ತಮ್ಮ ಶಾಲೆಯ ಮಕ್ಕಳ ನಿರಂತರ ಹಾಜರಾತಿ, ಶೈಕ್ಷಣಿಕ ಸುಧಾರಣೆಗೆ ಶಿಕ್ಷಕರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಶ್ರಮಿಕರಿಗೆ ಸನ್ಮಾನ: ಪ್ರತಿ ತಿಂಗಳು ಪ್ರತಿ ಶಾಲೆಯ ಶೈಕ್ಷಣಿಕ ಸಾಧನೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸುಧಾರಣೆ ಆಧಾರದಲ್ಲಿ ಉತ್ತಮಶಾಲೆ, ಉತ್ತಮ ಶಿಕ್ಷಕ, ಉತ್ತಮ ಮುಖ್ಯ ಶಿಕ್ಷಕ, ಉತ್ತಮ ವಿದ್ಯಾರ್ಥಿ ಹಾಗೂ ಉತ್ತಮ ತಾಲೂಕು ಆಯ್ಕೆ ಮಾಡಿ ಬಹುಮಾನ, ಪ್ರಶಂಸಾ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ. ಈ ಮೂಲಕ ಎಲ್ಲರಿಗೂ ಪ್ರೊತ್ಸಾಹ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಧಾರವಾಡ ಐಐಟಿ ಡೀನ್ ಮತ್ತು ಮಿಷನ್ ವಿದ್ಯಾಕಾಶಿ ಯೋಜನೆ ಉಪಾಧ್ಯಕ್ಷ ಪ್ರೋ. ಎಸ್.ಎಂ.ಶಿವಪ್ರಕಾಶ ಅವರು ಮಾತನಾಡಿ, ಎಲ್ಲರ ಪ್ರಾಮಾಣಿಕ ಪ್ರಯತ್ನ ಹಾಗೂ ಕಳಕಳಿಯಿಂದ ಮಾತ್ರ ಫಲಿತಾಂಶ ಸುಧಾರಣೆ ಸಾಧ್ಯ. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರನ್ನು ಇನ್ನಷ್ಟು ತರಬೇತಿಗೊಳಿಸಿ, ಫಲಿತಾಂಶ ಸುಧಾರಣೆಗೆ ಪ್ರಯತ್ನಸೋಣ. ಇದೊಂದು ಸಾಂಘಿಕ ಪ್ರಯತ್ನವಾಗಬೇಕು ಎಂದು ಅವರು ಹೇಳಿದರು.
ಶಿಕ್ಷಕರ ಬೋಧನೆಯೊಂದಿಗೆ ಪರೀಕ್ಷಾ ಪದ್ಧತಿ, ಪಾಠದ ಅವಧಿ, ವಿಷಯ ವಿಂಗಡನೆ ಹಾಗೂ ಇತರ ಅಂಶಗಳನ್ನು ತಜ್ಞರ ಸಮಿತಿ ಅವಲೋಕಿಸಿ, ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಿ, ಪಾಲ್ಗೊಳಬೇಕೆಂದು ಅವರು ಹೇಳಿದರು.
ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಜೀತ ಪ್ರಸಾದ, ಅಂತರಾಷ್ಟ್ರೀಯ ಪ್ರಸಿದ್ಧ ಭಾಷಣಕಾರ ಪ್ರದೀಪ ಆಚಾರ್ಯ ಪ್ರೇರಣಾ ಭಾಷಣ ಮಾಡಿದರು. ಹುಡಾ ಆಯುಕ್ತ ಸಂತೋಷ ಬಿರಾದಾರ ಮಾತನಾಡಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಮಾತನಾಡಿದರು. ಡಯಟ್ ಪ್ರಾಚಾರ್ಯೆ ಜಯಶ್ರೀ ಕಾರೇಕರ ವೇದಿಕೆಯಲ್ಲಿದ್ದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಸುಮಾರು 445 ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಾಗಾರದ ಕೊನೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಪ್ರೊ. ಎಸ್.ಎಂ.ಶಿವಪ್ರಸಾದ ಅವರು ಮುಖ್ಯಶಿಕ್ಷಕರೊಂದಿಗೆ ಮತ್ತು ಶಾಲಾ ಸುಧಾರಣಾ ಸಮಿತಿ ಅವರೊಂದಿಗೆ ಸಂವಾದ ನಡೆಸಿದರು.


Spread the love

Leave a Reply

Your email address will not be published. Required fields are marked *

You may have missed