ಕೊರೋನಾಗೆ ಸರಕಾರಿ ಶಾಲೆ ಶಿಕ್ಷಕಿ ಸಾವು: ಬಸ್ಸಲ್ಲಿ ಶಾಲೆಗೆ ಹೋಗಿದ್ದೆ ಕಂಟಕವಾಯಿತಾ..!
1 min readಗದಗ: ಜಿಲ್ಲೆಯ ನರಗುಂದ ಪಟ್ಟಣದ ನಿವಾಸಿಯಾಗಿದ್ದ ಶಿಕ್ಷಕಿಯೋರ್ವರು ಕಳೆದ ಹದಿನೈದು ದಿನದಿಂದ ನಿರಂತರವಾಗಿ ಬಸ್ಸಿನಲ್ಲಿ ಸಂಚಾರ ಮಾಡಿದ್ದರಿಂದಲೇ ಕೊರೋನಾ ದೃಢಪಟ್ಟು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಸಾವನಪ್ಪಿ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಮೂಲತಃ ನವಲಗುಂದ ತಾಲೂಕಿನ ಹಳ್ಳಿಕೇರಿ ಗ್ರಾಮದ ಸುನಂದಾ ಶಿವಪ್ಪ ಚಂದರಗಿ ಎಂಬ ಶಿಕ್ಷಕಿಯೇ ಸಾವಿಗೀಡಾಗಿದ್ದು, ಹಲವು ವರ್ಷಗಳಿಂದ ನರಗುಂದದ ಸರಸ್ವತನಗರದಲ್ಲಿ ವಾಸಿಸುತ್ತಿದ್ದರು. ಇಬ್ಬರು ಮಕ್ಕಳನ್ನ ಹೊಂದಿರುವ ಶಿಕ್ಷಕಿ ಇಂದು ಬೆಳಗಿನ ಜಾವ ಸಾವಿಗೀಡಾಗಿದ್ದಾರೆ.
ಕೊಣ್ಣೂರಿನ ಸರಕಾರಿ ಉರ್ದು ಶಾಲೆಯಲ್ಲಿ ಕನ್ನಡ ಪಾಠ ಮಾಡುತ್ತಿದ್ದ ಶಿಕ್ಷಕಿ ಸುನಂದಾ ಚಂದರಗಿಯವರ ಶನಿವಾರವಷ್ಟೇ ಗದಗನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಹೋದ ನಂತರ ಪಾಸಿಟಿವ್ ದೃಢಪಟ್ಟಿದ್ದು, ಆರು ದಿನಗಳ ನಂತರ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಅನಾರೋಗ್ಯಕ್ಕೆ ಈಡಾಗುವ ಮುನ್ನ ನರಗುಂದದಿಂದ ದಿನವೂ ಕೊಣ್ಣೂರಿಗೆ ಬಸ್ಸನಲ್ಲಿ ಪ್ರಯಾಣ ಬೆಳೆಸಿದ್ದರು. ಬಹುತೇಕ ಇದೇ ಕಾರಣಕ್ಕೆ ಕೊರೋನಾ ಪಾಸಿಟಿವ್ ಬಂದಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಸಂತಾಪ: ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ರಾಯನಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.