ವರ್ಗಾವಣೆ ಕಾಯ್ದೆ ಶಿಕ್ಷಕನ ಜೀವಕ್ಕೆ ಮುಳುವಾಯಿತು: ಬಾರದ ಲೋಕಕ್ಕೆ ಸರಕಾರಿ ಶಾಲೆ ಶಿಕ್ಷಕ
1 min readಹುಬ್ಬಳ್ಳಿ: ಸರಕಾರದ ಕಾಯ್ದೆಗಳು ಜನರನ್ನಷ್ಟೇ ಅಲ್ಲ, ಸರಕಾರಿ ನೌಕರರಿಗೂ ಹಲವು ಬಾರಿ ಮಾರಕವಾಗುತ್ತವೆ ಎಂಬುದಕ್ಕೆ ಶಿಕ್ಷಕರೋರ್ವರ ಸಾವು ಸಾಕ್ಷಿ ನುಡಿಯುವಂತಾಗಿದ್ದು ಖೇದಕರ ಸಂಗತಿಯಾಗಿದೆ.
ಮೂಲತಃ ಹುಬ್ಬಳ್ಳಿಯ ವಾಸುದೇವ ಜೋಗಿಯವರು ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಬಗಡದಿನ್ನಿ ಕ್ಯಾಂಪನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದರ ಜೊತೆಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಸ್ಥಾಪನಾ ಸಂಘಟನಾ ಕಾರ್ಯದರ್ಶಿಯಾಗಿಯೂ ಸಂಘಟಕರಾಗಿದ್ದರು.
ಇವರೀಗ ತೀವ್ರ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯ ಆವರಿಸಿದ್ದರೂ, ವರ್ಗಾವಣೆ ಕಾಯ್ದೆಗಳು ಇವರನ್ನ ಹುಟ್ಟಿದೂರಿನತ್ತ ಬರಲು ಬಿಡಲೇ ಇಲ್ಲ. ನಾನು ಸಾಯುವ ಮುನ್ನ ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ, ವಾಸುದೇವ ಜೋಗಿ ಅವರಿಗೆ ಆ ಅವಕಾಶ ಸಿಗಲೇ ಇಲ್ಲ.
ಸರಕಾರದ ವರ್ಗಾವಣೆ ಕಾಯ್ದೆಯಲ್ಲಿ ಹಲವು ಲೋಪದೋಷಗಳಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ವರ್ಗಾವಣೆ ಬಯಸಿ ಬಯಸಿ, ತೀವ್ರತರ ಕಾಯಿಲೆಯಿಂದ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ 52ರ ಹರೆಯದ ಶಿಕ್ಷಕ, ಶಿಕ್ಷಣ ಇಲಾಖೆಯ ಅನಿಯಮಿತ ವರ್ಗಾವಣೆ ಮತ್ತು ಅವೈಜ್ಞಾನಿಕ ಕಾಯಿದೆ ಇವರಿಗೆ ಮುಳುವಾಯಿಗಿದೆ.