ವಿದ್ಯಾಗಮದ ಸರಕಾರಿ ಶಾಲೆ ಶಿಕ್ಷಕಿ ಅಮಾನತ್ತು: ಯಾಕೆ ಗೊತ್ತಾ..?
ಚಾಮರಾಜನಗರ: ರಾಜ್ಯ ಸರಕಾರ ಆರಂಭಿಸಿರುವ ವಿದ್ಯಾಗಮ ಕೇಂದ್ರದಲ್ಲಿ ಅಸ್ಪೃಶತೆ ಸಂಬಂಧ ಶಾಲಾ ಶಿಕ್ಷಕಿಯನ್ನ ಅಮಾನತ್ತು ಮಾಡಿ ಆದೇಶವನ್ನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊರಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದ ವಿದ್ಯಾಗಮ ಕೇಂದ್ರದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕಿ ನಾಗಮಣಿ ಎಂಬುವವರನ್ನ ಅಮಾನತ್ತು ಮಾಡಿ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮಹದೇವನಾಯಕರನ್ನ ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಚಿಕ್ಕಾಟಿ ಗ್ರಾಮಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದ್ದರು. ವರದಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 1ರಂದು ಚಿಕ್ಕಾಟಿ ಗ್ರಾಮದ ಕನಕಭವನದಲ್ಲಿ ನಡೆಯುತ್ತಿದ್ದ ವಿದ್ಯಾಗಮದಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳನ್ನ ಒಳಗೆ ಸೇರಿಸಬಾರದೆಂದು ಸ್ಥಳೀಯರೊಬ್ಬರು, ಒತ್ತಾಯ ಮಾಡಿದ್ದರಿಂದ ಶಿಕ್ಷಕಿ ಆ ಸಮುದಾಯದ ವಿದ್ಯಾರ್ಥಿಗಳನ್ನ ಹೊರಗೆ ಕೂಡಿಸಿ ಪಾಠ ಮಾಡಿದ್ದರು.
ಈ ಘಟನೆ ಖಂಡಿಸಿ ಬೇಗೂರು ಪೊಲೀಸ್ ಠಾಣೆ ಎದುರು ಕರ್ನಾಟಕ ವಿದ್ಯಾರ್ಥಿ ಯುವ ವೇದಿಕೆ ಪ್ರತಿಭಟನೆ ನಡೆಸಿ, ಶಿಕ್ಷಕಿಯನ್ನ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.