ಲಖನೌ: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸದ್ಬುದ್ಧಿ ಮತ್ತು ಸರಿಯಾದ ವರ್ತನೆಯನ್ನು ಹೇಳಿ ಕೊಡಬೇಕಾದ ಶಿಕ್ಷಕರೇ ತಪ್ಪು ದಾರಿ ಹಿಡಿದರೆ ಹೇಗೆ? ಉತ್ತರ ಪ್ರದೇಶದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಮುಂದೆ ಅವಾಂತರ ಸೃಷ್ಟಿಸಿದ್ದಾನೆ. ಮಾಡಿದ ತಪ್ಪಿಗೆ ಈಗ ಸಸ್ಪೆಂಡ್ ಆಗಿದ್ದಾನೆ.
ವಿಶೇಶ್ವರ್‌ಗಂಜ್ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗಳ ಮುಂದೆ ನಗ್ನವಾಗಿ ಮಲಗಿಕೊಂಡಿದ್ದ ಆತನನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಶ್ವರ್‌ಗಂಜ್ ಬ್ಲಾಕ್‌ನಲ್ಲಿರುವ ಶಿವಪುರ ಬೈರಾಗಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ದುರ್ಗಾ ಪ್ರಸಾದ್ ಜೈಸ್ವಾಲ್ ಕುಡಿದ ಅಮಲಿನಲ್ಲಿ ಶಾಲೆಯ ತರಗತಿಯಲ್ಲಿ ಬೆತ್ತಲೆಯಾಗಿ ಮಲಗಿರುವ ವೀಡಿಯೊ ವೈರಲ್ ಆಗಿದೆ. ಶಿಕ್ಷಕರ ಕುಚೇಷ್ಟೆಯಿಂದ ವಿದ್ಯಾರ್ಥಿಗಳು ಸಾಕಷ್ಟು ಮುಜುಗರ ಎದುರಿಸಬೇಕಾಗಿದೆ.
ವೈರಲ್ ಆಗಿರುವ ವಿಡಿಯೋದ ಸತ್ಯಾಸತ್ಯತೆ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಪಗೊಂಡ ಪೋಷಕರು ಮತ್ತು ಗ್ರಾಮಸ್ಥರು ‘ಜೈಸ್ವಾಲ್ ಆಗಾಗ್ಗೆ ವಿದ್ಯಾರ್ಥಿಗಳ ಮುಂದೆ ಅಶ್ಲೀಲ ಕೃತ್ಯಗಳಲ್ಲಿ ತೊಡಗುತ್ತಾರೆ’ ಎಂದು ಆರೋಪಿಸಿದ್ದಾರೆ. ಮುಖ್ಯೋಪಾಧ್ಯಾಯರು ತರಗತಿಯಲ್ಲಿ ತಮ್ಮ ಬಟ್ಟೆಗಳನ್ನು ತೆಗೆದು ವಿಶ್ರಾಂತಿ ಪಡೆಯುತ್ತಾರೆ. ಈ ಚೇಷ್ಟೆಗಳಿಂದ ಮುಜುಗರಕ್ಕೊಳಗಾದ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.
ದೂರಿನ ಬಗ್ಗೆ ತನಿಖೆ ನಡೆಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮುಖ್ಯೋಪಾಧ್ಯಾಯನನ್ನು ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿದ್ದಾರೆ.