ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಮಾನತ್ತು: ಜೂಜಾಟ ತಂದ ಕುತ್ತು
1 min readರಾಯಚೂರು: ಕೊರೋನಾ ಸಮಯದಲ್ಲೂ ವಿದ್ಯಾಗಮ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಬೇಕಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೇ ಇಸ್ಪೀಟ್ ಆಟದಲ್ಲಿ ತೊಡಗಿ ಬಂಧನವಾಗಿದ್ದವರನ್ನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಕ ಮಹಾಶಯನನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಕಾರ್ಯಾಲಯವನ್ನೇ ಇಸ್ಪೀಟ್ ಅಡ್ಡೆ ಮಾಡಿಕೊಂಡಿದ್ದ ಕೆಲವರು ನಿರಂತರವಾಗಿ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿಯ ಮೇರೆಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಪೊಲೀಸರ ದಾಳಿ ನಡೆಸಿದಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ವೀರಭದ್ರಪ್ಪ ಸೇರಿದಂತೆ ಹನ್ನೆರಡು ಜನರನ್ನ ಬಂಧನ ಮಾಡಲಾಗಿತ್ತು.
ಈ ಮಾಹಿತಿಯನ್ನ ಆಧರಿಸಿ ರಾಯಚೂರು ಡಿಡಿಪಿಐ ಬಿ.ಎಚ್.ಗೋನಾಳ ಅವರು, ರಾಯಚೂರು ತಾಲೂಕಿನ ಏಗನೂರು ದಂಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಹಾಗೂ ಕರ್ನಾಟಕ ಸರಕಾರಿ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಪ್ಪರನ್ನ ಅಮಾನತ್ತು ಮಾಡಿದ್ದಾರೆ.
ಈ ಬಗ್ಗೆ ಆದೇಶದಲ್ಲಿ ಪವಿತ್ರವಾದ ಶಿಕ್ಷಕ ವೃತ್ತಿಯನ್ನ ದುರುಪಯೋಗ ಮಾಡಿಕೊಂಡಿರುವುದು ಮೇಲುನೋಟಕ್ಕೆ ಗೊತ್ತಾಗುತ್ತಿದೆ. ಸರಕಾರಿ ನಿಯಮಗಳನ್ನ ಗಾಳಿಗೆ ಉಲ್ಲಂಘನೆ ಮಾಡಲಾಗಿದೆ ಎಂದು ನಮೂದು ಮಾಡಿದ್ದಾರೆ.