ಈ ಸರಕಾರಿ ಶಾಲೆ ಶಿಕ್ಷಕ ಸಕಲಕಲಾವಲ್ಲಭ: ಸಿಕ್ಕಿತು ಶಿಕ್ಷಣ ಚೇತನ ಪ್ರಶಸ್ತಿ
ಮೈಸೂರು: ಸರಕಾರಿ ಶಾಲೆ ಶಿಕ್ಷಕರು ಎಂದರೇ ಚೂರು ಅಸಡ್ಡೆಯಿಂದ ಮಾತನಾಡುವವರು ಇದ್ದಾರೆ. ಅಂಥವರಿಗೆ ಚಾಟಿಯೇಟು ನೀಡುವ ಶಿಕ್ಷಕರನ್ನ ನಿಮಗೆ ಪರಿಚಯ ಮಾಡುತ್ತಿದ್ದೇವೆ ನೋಡಿ..
ಇವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹುಂಡಿಹಾಳವೆಂಬ ಗಡಿ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಿಳು ಭಾಷೆಯನ್ನೇ ಹೆಚ್ಚು ಉಪಯೋಗಿಸುವ ಈ ನೆಲದಲ್ಲಿ ಕನ್ನಡದ ಕಂಪನ್ನ ಬೆಳೆಸುತ್ತಿರುವ ಶಿಕ್ಷಕರೇ ಸತೀಶ ಜವರೇಗೌಡ.
ಮೂಲತಃ ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದವರಾದ ಶಿಕ್ಷಕ ಸತೀಶ, ಕವಿಯಾಗಿಯೂ, ಪರಿಸರ ಪ್ರೇಮಿಯಾಗಿಯೂ, ದೈಹಿಕ ಶಿಕ್ಷಕರಾಗಿಯೂ ಮಕ್ಕಳಿಗೆ ಹೊಸದೊಂದು ಲೋಕವನ್ನೇ ಸೃಷ್ಟಿಸುತ್ತ ಮುನ್ನಡೆಯುತ್ತಿದ್ದಾರೆ.
ಶಿಕ್ಷಣ ಚೇತನ ಪ್ರಶಸ್ತಿ ಸ್ವೀಕಾರ
ಹಸಿರು ಭೂಮಿ ಟ್ರಸ್ಟ್ ವತಿಯಿಂದ ಮೈಸೂರಿನ ನೇಗಿಲಯೋಗಿ ಭವನದಲ್ಲಿ ನಡೆದ ಸಮಾರಂಭದಲ್ಲಿ ‘ಶಿಕ್ಷಣ ಚೇತನ ಪ್ರಶಸ್ತಿ’ ಯನ್ನು ಖ್ಯಾತ ಸಾಹಿತಿ ಮತ್ತು ವಿಚಾರವಾದಿ ಪ್ರೊ. ಕೆ.ಎಸ್.ಭಗವಾನ್ ಅವರಿಂದ ಶಿಕ್ಷಕ ಸತೀಶ ಜವರೇಗೌಡ ಇತ್ತೀಚೆಗೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಉಪ ಆಯುಕ್ತ ಡಾ. ಎ.ಎನ್. ಪ್ರಕಾಶ್ ಗೌಡ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪದ್ಮಾ ಶೇಖರ್, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಎಸ್. ಶಿವರಾಜಪ್ಪ, ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಶಿಕ್ಷಕ ಮಿತ್ರ ಟಿ. ಲೋಕೇಶ್ ಹುಣಸೂರು, ಟ್ರಸ್ಟ್ ಅಧ್ಯಕ್ಷ ಜ್ಞಾನೇಶ್ ನರಹಳ್ಳಿ ಉಪಸ್ಥಿತರಿದ್ದರು.