ಟಾಟಾ ಮಾರ್ಕೋಪೋಲೊ ಕಂಪನಿಯಲ್ಲಿ 116 ಜನರಿಗೆ ಕೊರೋನಾ ಪಾಸಿಟಿವ್: ಆಗಸ್ಟ್ 3ರ ವರೆಗೆ ಕಂಪನಿ ಬಂದ್
ಧಾರವಾಡ: ನಗರದ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ಟಾಟಾ ಮಾರ್ಕೊಪೋಲೊ ಕಂಪನಿಯನ್ನು ಇಂದಿನಿಂದ ಆಗಸ್ಟ್ 3 ರವರೆಗೆ ಮುಚ್ಚಲು ಕಾರ್ಖಾನೆ ಆಡಳಿತ ಮಂಡಳಿ ನಿರ್ಧರಿಸಿದೆ.ಈ ಕುರಿತು ನಿನ್ನೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರೊಂದಿಗೆ ಕಂಪನಿಯ ಸಿಇಓ ಅವರೊಂದಿಗೆ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಂಪನಿಯ ಕಾರ್ಮಿಕರಿಗೆ ಸೋಂಕು ಕಾಣಿಸಿ ಕೊಂಡಿರುವುದರಿಂದ ಸ್ಯಾನಿಟೈಸೇಷನ್, ತಪಾಸಣೆ ನಿರಂತರವಾಗಿ ನಡೆಸಲಾಗುತ್ತಿದೆ. ಕಾರ್ಮಿಕರು,ಸಿಬ್ಬಂದಿ ಹಾಗೂ ಕಂಪನಿಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಂಟು ದಿನಗಳ ಕಾಲ ಕೈಗಾರಿಕಾ ಘಟಕದ ಚಟುವಟಿಕೆಗಳನ್ನು ಎಂಟು ದಿನಗಳ ಕಾಲ ಸ್ಥಗಿತಗೊಳಿಸಲು ಕಾರ್ಖಾನೆ ಆಡಳಿತ ಮಂಡಳಿಯು ಸ್ವಯಂ ಪ್ರೇರಿತರಾಗಿ ನಿರ್ಣಯಿಸಿದ್ದಾರೆ.
*ಧೃತಿಗೆಡದಿರಲು ಮನವಿ*
ಕೊರೋನಾ ಒಂದು ದುರ್ಬಲ ವೈರಾಣುವಾಗಿದೆ. ಸರಳ ಚಿಕಿತ್ಸೆ ಮೂಲಕ ಸೋಂಕು ನಿವಾರಿಸಿಕೊಳ್ಳಬಹುದಾಗಿದೆ ಕೊರೋನಾ ಭಯದಿಂದ ಯಾರೊಬ್ಬರೂ ಧೃತಿಗೆಡಬಾರದು, ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಂಕಿತರಿಗೆ ಮತ್ತು ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ನಿರಂತರವಾಗಿ ದೂರವಾಣಿ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ದೂರವಾಣಿ ಸಂಪರ್ಕ ಲೈನ್ ಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.
ಧಾರವಾಡ ಮಾನಸಿಕ ಆರೋಗ್ಯ ವಿಜ್ಞಾನ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಮತ್ತು ಆಯುಷ್ ವಿಭಾಗಗಳ ಮೂಲಕ ಮನೋ ಸ್ವಾಸ್ಥ್ಯ ನಿರ್ವಹಣೆಗೆ ವಿಡಿಯೋ ಸಂವಾದದ ಮೂಲಕ ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ, ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಜಿಲ್ಲೆಯ ಜನತೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.