ಮರವನ್ನೇರಿದ್ದ ತಹಶೀಲ್ದಾರ ರಕ್ಷಣೆ: ನಿಟ್ಟುಸಿರು ಬಿಟ್ಟ ಜಿಲ್ಲಾಡಳಿತ
ಕಲಬುರಗಿ: ಪ್ರವಾಹದಲ್ಲಿ ಕಾರು ಕೊಚ್ಚಿಕೊಂಡು ಹೋದ ತಕ್ಷಣವೇ ಕಾರು ಬಿಟ್ಟು ಮರವನ್ನೇರಿ ಪ್ರಾಣ ಉಳಿಸಿಕೊಂಡಿದ್ದ ತಹಶೀಲ್ದಾರರನ್ನ ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಯಶಸ್ವಿಯಾಗಿದ್ದು, ಜಿಲ್ಲಾಡಳಿಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಯಾದಗಿರಿಯಿಂದ ಬೀದರಗೆ ಕಾರಿನಲ್ಲಿ ಹೊರಟಿದ್ದ ಯಾದಗಿರಿ ತಹಶೀಲ್ದಾರ್ ಪಂಡಿತ ಬಿರಾದಾರ ಅವರು, ಚಿಂಚೋಳಿ ತಾಲೂಕಿನ ಗಣಾಪುರ ಬಳಿ ಸೇತುವೆ ದಾಟುವಾಗ ನೀರಿನ ರಭಸ ಹೆಚ್ಚಾದಾಗ ಕಾರ್ ನಿಂದ ಇಳಿದು ಮರ ಹತ್ತಿ ಕುಳಿತಿದ್ದರು.
ತಮ್ಮ ಕಣ್ಣೆದುರೇ ಕಾರ್ ಕೊಚ್ಚಿಕೊಂಡು ಹೋಗುವುದು ನೋಡಿಯೂ ಧೈರ್ಯದಿಂದಲೇ ಮರವನ್ನೇರಿ ಕೂತಿದ್ದ ತಹಶೀಲ್ದಾರ ಪಂಡಿತ ಬಿರಾದಾರ, ಸುಮಾರು 2ಗಂಟೆಯ ಕಾರ್ಯಾಚರಣೆಯ ನಂತರ ತಹಶೀಲ್ದಾರರನ್ನು ಸುರಕ್ಷಿತವಾಗಿ ಹೊರ ಕರೆದುಕೊಂಡು ಬರುವಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತಹಶೀಲ್ದಾರ ಜೀವ ಉಳಿಸಿಕೊಳ್ಳಲು ಮರವೇರಿದ್ದ ಪ್ರಕರಣದ ಜಿಲ್ಲೆಯಾಧ್ಯಂತ ದೊಡ್ಡ ಸುದ್ದಿಯಾಗಿದ್ದರಿಂದ ಜಿಲ್ಲಾಡಳಿತ ಮತ್ತಷ್ಟು ಕಂಗಾಲಾಗಿತ್ತು. ಮಾಹಿತಿ ದೊರೆತ ತಕ್ಷಣವೇ ಕಾರ್ಯಾಚರಣೆ ಆರಂಭಿಸಿದರೂ, ನೀರಿನ ಸೆಳೆವು ಹೆಚ್ಚಾಗಿದ್ದರಿಂದ ರಕ್ಷಣಾ ಕಾರ್ಯ ವಿಳಂಬವಾಗಿತ್ತು.
ತಹಶೀಲ್ದಾರ ಪಂಡಿತ ಬಿರಾದಾರರನ್ನ ಹೆಗಲ ಮೇಲೆ ಹೊತ್ತುಕೊಂಡು ನೀರಿನಿಂದ ಹೊರಗೆ ಬರಲಾಯಿತು. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಗ್ಯದಲ್ಲಿ ಯಾವುದೇ ತೊಂದರೆಯಾಗಿಲ್ಲವೆಂದು ಗೊತ್ತಾಗಿದೆ.