ತಹಶೀಲ್ದಾರರ ನಕಲಿ ಸಹಿ- 75ಲಕ್ಷ ವಿತ್ ಡ್ರಾ: ಕಂಗಾಲಾದ ದಂಡಾಧಿಕಾರಿ
ಯಾದಗಿರಿ: ಜಿಲ್ಲೆಯ ಸುರಪುರ ನಗರದ ಕಬಾಡಗೆರಾದಲ್ಲಿರುವ ಎಕ್ಸಿಸ್ ಬ್ಯಾಂಕ್ ಶಾಖೆಯಲ್ಲಿನ ಸುರಪುರ ತಹಶೀಲ್ದಾರ್ ಹೆಸರಿನ ಖಾತೆಯಲ್ಲಿದ್ದ ಸುಮಾರು 75 ಲಕ್ಷಕ್ಕೂ ಅಧಿಕ ಹಣವನ್ನು ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಹಶೀಲ್ದಾರ್ ಸುರಪುರ ಹೆಸರಿನ ಎಕ್ಸಿಸ್ ಬ್ಯಾಂಕ್ ಖಾತೆಯ 9190 100803 3954 ಸಂಖ್ಯೆಯ ಖಾತೆಯಲ್ಲಿದ್ದ ಸುಮಾರು 75 ಲಕ್ಷ 59 ಸಾವಿರ 900 ರೂಪಾಯಿಗಳನ್ನು ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆ 2020ರ ಜೂನ್ 1ನೇ ತಾರೀಖು ನಡೆದಿದೆ.
ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರು ಕೊರೋನಾ ಸೋಂಕಿನಿಂದಾಗಿ ಕಳೆದ ಅನೇಕ ದಿನಗಳಿಂದ ಚಿಕಿತ್ಸೆಗಾಗಿ ಕಲಬುರ್ಗಿ ಮತ್ತು ಹೈದರಾಬಾದ್ ಆಸ್ಪತ್ರೆಯಲ್ಲಿದ್ದು ಈಗ ಮರಳಿ ಕರ್ತವ್ಯಕ್ಕೆ ಹಾಜರಾಗಿ ಕಚೇರಿಯಲ್ಲಿ ನಡೆದ ವ್ಯವಹಾರಗಳ ಕುರಿತು ಪರಿಶೀಲನೆ ನಡೆಸುವಾಗ ತಮ್ಮ ಬ್ಯಾಂಕ್ ಖಾತೆಯಿಂದ 75 ಲಕ್ಷಕ್ಕೂ ಅಧಿಕ ಹಣದ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಬ್ಯಾಂಕ್ ಶಾಖೆಗೆ ಹೋಗಿ ವಿಚಾರಣೆ ನಡೆಸಿದಾಗ ಸುರಪುರ ತಹಶೀಲ್ದಾರ್ ಖಾತೆಯಿಂದ ಮಹಾಲಕ್ಷ್ಮಿ ಎಂಟರ್ಪ್ರೈಸಸ್ ಎನ್ನುವ ಖಾತೆದಾರರಿಗೆ ಸುಮಾರು 75 ಲಕ್ಷ 59 ಸಾವಿರ 900 ರೂಪಾಯಿಗಳು ಜೂನ್ 1 ರಂದು ಸಂದಾಯವಾಗಿರುವ ಬಗ್ಗೆ ತಿಳಿದುಬಂದಿದೆ.
ಮಹಾಲಕ್ಷ್ಮಿ ಎಂಟರ್ಪ್ರೈಸಸ್ ಯಾರದೆಂದು ಪರಿಶೀಲಿಸಿದಾಗ ಲಕ್ಷ್ಮೀ ಗಂಡ ರಾಜು ಕಟ್ಟಿಮನಿ ಎಂಬುವ ಹುಣಸಗಿ ತಾಲೂಕಿನ ವಜ್ದಲ ಗ್ರಾಮದ ಮಹಿಳೆಯ ಹೆಸರಲ್ಲಿರುವುದಾಗಿ ತಿಳಿದು ಬಂದಿದೆ.ಇದನ್ನು ಕುರಿತು ತಹಸೀಲ್ದಾರ ನಿಂಗಣ್ಣ ಬಿರಾದರ್ ಅವರು ನಡೆದ ವಂಚನೆಯ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ..