ಈಜಲು ಹೋದ ಐವರಲ್ಲಿ ನಾಲ್ವರು ನಾಪತ್ತೆ: ನಡೆದಿದೆ ಕಾರ್ಯಾಚರಣೆ

ಯಾದಗಿರಿ: ರವಿವಾರದ ಮಜಾ ಮಾಡಲು ಐವರು ಗೆಳೆಯರು ಕೂಡಿಕೊಂಡು ಈಜಲು ತೆರಳಿದ್ದಾಗ ನಾಲ್ವರು ನೀರಿನ ಸೆಳವಿಗೆ ಸಿಕ್ಕು ನಾಪತ್ತೆಯಾದ ಘಟನೆ ಯಾದಗಿರಿ ನಗರದ ಹೊರವಲಯದ ಗುರುಸಣಗಿ ಬ್ರಿಡ್ಜ್ ಬಳಿ ಸಂಭವಿಸಿದೆ.
ಐವರು ಗೆಳೆಯರು ಈಜಲು ಹೋದಾಗ ಗುಂಪಿನಲ್ಲಿದ್ದ ಎಂ.ಡಿ.ಅಬ್ದುಲ ಎಂಬಾತನನ್ನ ಬಟ್ಟೆ ಕಾಯುವಂತೆ ನಿಲ್ಲಿಸಿ ನಾಲ್ಕು ಜನರು ನೀರಿಗೆ ಧುಮಕಿದ್ದಾರೆ. ಯಾದಗಿರಿಯ ಅಮಾನ್(16), ಅಯಾನ್(16), ಕಲಬುರಗಿ ಮೂಲದ ರೆಹಮಾನ್(16) ಹಾಗೂ ನಾಸೀರ ನಾಪತ್ತೆಯಾದ ಬಾಲಕರು.
ನೀರಿನಲ್ಲಿ ಆಯ ತಪ್ಪಿ ನಾಲ್ವರು ಬಾಲಕರು ಮುಳಗಿರಬಹುದೆಂದು ಶಂಕಿಸಲಾಗಿದ್ದು, ಸ್ಥಳಕ್ಕೆ ಎಸ್ ಪಿ ಋಷಿಕೇಶ್ ಸೋನವಣೆ, ಎಡಿಸಿ ಪ್ರಕಾಶ್ ಸಿಂಗ್ ರಾಜಪೂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಲು ಸೂಚಿಸಿದ್ದಾರೆ.
ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಈಜು ಪರಿಣಿತರು ಆಗಮಿಸಿದ್ದು, ಬಾಲಕರ ಹುಡುಕಾಟ ನಡೆದಿದೆ. ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾವಣೆ ಆಗಿದ್ದು, ಬಾಲಕರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದೆ.
ರಾತ್ರಿಯಾಗಿದ್ದರಿಂದ ಬೆಳಕಿನ ಸಮಸ್ಯೆಯಾಗುತ್ತಿದ್ದು, ದೀಪದ ವ್ಯವಸ್ಥೆ ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಗಳೇ ಸ್ಥಳದಲ್ಲಿ ಬೀಡಾರ ಹೂಡಿದ್ದು, ಕಾರ್ಯಾಚರಣೆ ಎಲ್ಲಿಯವರೆಗೆ ನಡೆಯಲಿದೆ ಎಂಬುದನ್ನ ಕಾದು ನೋಡಬೇಕಿದೆ