ಹೃದಯಾಘಾತದಿಂದ ಅಭಿನವ ಶಿವಪುತ್ರ ಮಹಾಸ್ವಾಮೀಜಿ ಲಿಂಗೈಕ್ಯ: ನಾಳೆ ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ
ಬೆಳಗಾವಿ: ಅಭಿನವ ಶಿವಪುತ್ರ ಮಹಾಸ್ವಾಮಿಗಳು, ಷಣ್ಮುಖಾರೂಢ ಮಠ ವಿಜಯಪುರ ಹಾಗೂ ಶಾಂತಾಶ್ರಮ ಹುಬ್ಬಳ್ಳಿ (64) ಇವರು ಹೃದಯಾಘಾತದಿಂದ ಶುಕ್ರವಾರ ರಾತ್ರಿ ೮.೩೦ ಗಂಟೆಗೆ ಲಿಂಗೈಕ್ಯರಾಗಿದ್ದಾರೆ.
ನಗರದ ಕೆಎಲ್ಇ ಆಸ್ಪತ್ರೆಗೆ ಇಂದು ಸಂಜೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾದರು. ಕಳೆದ ಎರಡು ದಿನಗಳಿಂದ ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೆಚ್ಚಿನ ಚಿಕಿತ್ಸೆಗೆ ಇಂದು ಸಂಜೆ ಕೆ.ಎಲ್.ಇ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾದರು ಎಂದು ಶ್ರೀಮಠದ ಉತ್ತರಾಧಿಕಾರಿಗಳಾದ ಅಭಿನವ ಸಿದ್ಧಾರೂಢ ಸ್ವಾಮೀಜಿಯವರು ತಿಳಿಸಿದ್ದಾರೆ.
ನಾಳೆ ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆ
ಅಭಿನವ ಶಿವಪುತ್ರ ಮಹಾಸ್ವಾಮಿಗಳ ಸಮಾಧಿಕ್ರಿಯೆ ಶನಿವಾರ (ಆ.8) ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಬಳಿಯ ಶಾಂತಾಶ್ರಮದ ಆವರಣದಲ್ಲಿ ಪೂಜ್ಯರ ಸಮಾಧಿ ಕ್ರಿಯೆ ನೆರೆವೇರಲಿದೆ.
ಸಂತಾಪ: ಶ್ರೀಗಳ ನಿಧನಕ್ಕೆ ಶಿವಾನಂದ ಭಾರತಿ ಸ್ವಾಮಿಗಳು ಸಾಧು ಸಂಸ್ಥಾನಮಠ ಇಂಚಲ, ಶಿವಕುಮಾರ ಸ್ವಾಮಿಗಳು ಬೀದರ್, ಗದುಗಿನ ಡಂಬಳ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತಿತರರ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.