ಶಾಸಕ ಅಮೃತ ದೇಸಾಯಿ ದೂರಿಗೆ ಹೊರಬಿತ್ತು ಸತ್ಯ: ಪಿಡಿಓ, ತಲಾಠಿ, ಸರ್ಕಲ್ ಸೇರಿದಂತೆ ನಾಲ್ವರ ಅಮಾನತ್ತು..!
1 min readಧಾರವಾಡ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಮಾಡುವಲ್ಲಿ ಅವ್ಯವಹಾರ ನಡೆಸಿದ ಗ್ರಾಮ ಲೆಕ್ಕಿಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರನನ್ನ ಅಮಾನತ್ತು ಮಾಡಿ ಆದೇಶವನ್ನ ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.
ಧಾರವಾಡ-71 ಕ್ಷೇತ್ರದ ಶಾಸಕ ಅಮೃತ ದೇಸಾಯಿ, ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಕ್ರಮವನ್ನ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಜಿಲ್ಲಾಧಿಕಾರಿಗಳು, ನಾಲ್ವರು ಅಧಿಕಾರಿಗಳನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಧಾರವಾಡ ತಾಲೂಕಿನ ಯಾದವಾಡ ಗ್ರಾಮ ಲೆಕ್ಕಿಗ ರಾಕೇಶ ಪಾಟೀಲ, ಗರಗ ಕಂದಾಯ ನಿರೀಕ್ಷಕ ಎನ್.ಎಸ್.ಪಟ್ಟೇದ, ಲೋಕೋಪಯೋಗಿ ಇಲಾಖೆಯ ಧಾರವಾಡ ಉಪವಿಭಾಗದ ಸಹಾಯಕ ಅಭಿಯಂತರ ನಿಖಿಲೇಶ ಭಾರದೇಶ ಹಾಗೂ ಯಾದವಾಡ ಪೀರಪ್ಪ ವಾಲೀಕಾರ ಅಮಾನತ್ತಾದ ನೌಕರರಾಗಿದ್ದಾರೆ.
ಮನೆಗಳ ಸಮೀಕ್ಷೆ ಮಾಡುವಾಗ ಅವ್ಯವಹಾರ ಮಾಡಲಾಗಿತ್ತು. ಈ ಬಗ್ಗೆ ಕ್ಷೇತ್ರದ ಜನರು ಶಾಸಕ ಅಮೃತ ದೇಸಾಯಿ ಅವರಿಗೆ ದೂರನ್ನ ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ಮಾಡಿ, ಇವರನ್ನ ಅಮಾನತ್ತು ಮಾಡುವಂತೆ ಕೋರಿದ್ದನ್ನ ಇಲ್ಲಿ ಸ್ಮರಿಸಬಹುದು.