ವಾಕರಸಾ ಸಂಸ್ಥೆಯಿಂದ 26 ಸಿಬ್ಬಂದಿಗಳ ಡಿಸ್ಮೀಸ್…!
 
        ಹುಬ್ಬಳ್ಳಿ: ಮುಷ್ಕರ ಆರಂಭದ ದಿನದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿರುವ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿ ನೇಮಕಾತಿ ಪ್ರಾಧಿಕಾರಸ್ಥರೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಆದೇಶ ಹೊರಡಿಸಿದ್ದಾರೆ.

ಮುಷ್ಕರ ಕೈ ಬಿಟ್ಟು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಇಲ್ಲದಿದ್ದರೆ ಸೇವೆಯಿಂದ ವಜಾ ಮಾಡುವುದಾಗಿ ತಿಳಿಸಿ ತರಬೇತಿ ನೌಕರರಿಗೆ ಶೋಕಾಸ್ ನೋಟಿಸ್ ಮತ್ತು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಆದಾಗ್ಯೂ ಸಹ ಇಂದಿನವರೆಗೆ ಕೆಲಸಕ್ಕೆ ಹಾಜರಾಗದೇ ಇರುವ 26 ತರಬೇತಿ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಇವರಲ್ಲಿ 15 ಚಾಲಕರು, 8 ಚಾಲಕ ಕಂ ನಿರ್ವಾಹಕರು, ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಒಬ್ಬರು ಕಿರಿಯ ಸಹಾಯಕ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದ 2, ಗ್ರಾಮಾಂತರ 2ನೆ ಘಟಕದ 2, ಗ್ರಾಮಾಂತರ 3ನೇ ಘಟಕದ 1, ನವಲಗುಂದ ಘಟಕದ 6 ಮತ್ತು ಕಲಘಟಗಿ ಘಟಕದ 17 ತರಬೇತಿ ಸಿಬ್ಬಂದಿಗಳನ್ನು ಆಯ್ಕೆ ಪಟ್ಟಿಯಿಂದ ಕೂಡಲೆ ಜಾರಿಗೆ ಬರುವಂತೆ ತೆಗೆದು ಹಾಕಲಾಗಿದೆ.
ವಜಾಗೊಂಡಿರುವ ಸಿಬ್ಬಂದಿ ಸಂಸ್ಥೆಯಲ್ಲಿ ಖಾಯಂ ನೇಮಕಾತಿ ಹಕ್ಕನ್ನು ಸಹ ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
 
                       
                       
                       
                       
                      
 
                         
                 
                 
                