“ಬಸಣ್ಣನ ಮಗ-ಸುಜಯ ಕೊರವರ” ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ…

67ನೇ ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕರ ಕ್ರಿಕೆಟ್ ಪಂದ್ಯಾವಳಿಗೆ
ರಾಜ್ಯ ತಂಡಕ್ಕೆ ಧಾರವಾಡದ ಸುಜಯ ಬಿ. ಕೊರವರ ಆಯ್ಕೆ
ಧಾರವಾಡ: 67ನೇ ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕರ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಬಿಹಾರದ ಪಾಟ್ನಾದಲ್ಲಿ
ಜ. 16 ರಿಂದ 23 ರವರೆಗೆ ಆಯೋಜಿಸಲಾಗಿದೆ.
ಸದರಿ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಆಹ್ವಾನಿಸಲಾಗಿತ್ತು.
ಈ ತಂಡದಲ್ಲಿ ರಾಜ್ಯದ ವಿವಿಧ ಜಿಲ್ಲೆಯ 16 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅದರಲ್ಲಿ ಧಾರವಾಡದ ಮೌಲಾನಾ ಆಜಾದ್ ಮಾದರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಸುಜಯ ಬಿ. ಕೊರವರ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ (ದೈಹಿಕ ಶಿಕ್ಷಣ) ಸಹ ನಿರ್ದೇಶಕರಾದ ಎಸ್. ಎನ್ ರಮೇಶ ಅವರು ತಿಳಿಸಿದ್ದಾರೆ.
ಸುಜಯ ಬಿ. ಕೊರವರ ಧಾರವಾಡದ ಫಸ್ಟ್ ಕ್ರಿಕೆಟ್ ಅಕಾಡೆಮಿಯ ಸಂದೀಪ್ ಪೈ ವಿದ್ಯಾರ್ಥಿಯಾಗಿದ್ದು, ಸದ್ಯ ಬೆಂಗಳೂರಿನ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಸುಜಯ ಬಿ. ಕೊರವರ 67ನೇ ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕರ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ ಆಗಿರುವುದು ವಿದ್ಯಾಕಾಶಿ ಧಾರವಾಡ ಜಿಲ್ಲೆಗೆ ಮತ್ತೊಂದು ಗರಿ ಮೂಡಿದಂತಾಗಿದೆ. ರಾಷ್ಟ್ರೀಯ ಪಂದ್ಯಾವಳಿಯಲ್ಲಿ ರಾಜ್ಯದ ತಂಡ ವಿಜಯ ಪತಾಕೆ ಹಾರಿಸಲೆಂದು ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.