ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಿನ್ಸಿಪಾಲ್ ಸೇರಿ 15ಜನರ ಮೇಲೆ ಎಫ್ಐಆರ್…
1 min readರಾಜಸ್ಥಾನ: ಅಲ್ವಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಾಲ್ವರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲಾಗಿದ್ದು, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಕೃತ್ಯಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರು ಸೇರಿದಂತೆ 15 ಸಿಬ್ಬಂದಿಗಳ ವಿರುದ್ದ ರಾಜಸ್ಥಾನ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ದೌರ್ಜನ್ಯಕ್ಕೆ ತುತ್ತಾದ ವಿದ್ಯಾರ್ಥಿನಿಯರು 3, 4, 6 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆಯರು ಹೇಳಿದ್ದಾರೆ.
“ತನ್ನ ಮೇಲೆ ಶಾಲೆಯ ಪ್ರಾಂಶುಪಾಲ ಮತ್ತು ಇತರ ಶಿಕ್ಷಕರು ಒಂದು ವರ್ಷದಿಂದ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ. ಇಬ್ಬರು ಮಹಿಳಾ ಶಿಕ್ಷಕರು ಆ ಕೃತ್ಯದ ವಿಡಿಯೋಗಳನ್ನು ಕೂಡ ಮಾಡಿದ್ದಾರೆ” ಎಂದು 10ನೇ ತರಗತಿಯ ಸಂತ್ರಸ್ತ ವಿದ್ಯಾರ್ಥಿನಿ ಹೇಳಿದ್ದಾರೆ.
ಈ ಕೃತ್ಯದ ಬಗ್ಗೆ ಸಂತ್ರಸ್ತೆಯೊಬ್ಬರು ಮಹಿಳಾ ಶಿಕ್ಷಕರಿಗೆ ದೂರು ನೀಡಿದಾಗ, ಅವರೂ ಕೂಡ ಬಾಲಕಿಗೆ ಶಾಲಾ ಶುಲ್ಕ ಮತ್ತು ಪುಸ್ತಕಗಳನ್ನು ಕೊಡಿಸುವುದಾಗಿ “ಆಮಿಷ” ವೊಡ್ಡಿದರು ಮತ್ತು ಈ ಬಗ್ಗೆ ಯಾರಿಗೂ ದೂರು ನೀಡದಂತೆ ಕೇಳಿಕೊಂಡರು ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
“ನಾಲ್ವರು ಸಂತ್ರಸ್ತ ಅಪ್ರಾಪ್ತ ಬಾಲಕಿಯರ ಕುಟುಂಬದ ಸದಸ್ಯರು ಮಂಗಳವಾರ ರಾತ್ರಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಶಾಲೆಯ ಒಟ್ಟು ಸಿಬ್ಬಂದಿಗಳಾ 15 ಜನರ ವಿರುದ್ದ ಸಾಮೂಹಿಕ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಹೊರಿಸಿದ್ದಾರೆ” ಎಂದು ಭಿವಾಡಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಮೂರ್ತಿ ಜೋಶಿ ತಿಳಿಸಿದ್ದಾರೆ.
ಆದಾಗ್ಯೂ, ಈ ಪ್ರಕರಣದಲ್ಲಿ ಸಾಕ್ಷಿಗಳು ಹಾಗೂ ಕಿರುಕುಳ ಸಂಭವನೀಯ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕವಾಗಿ, ಈ ಪ್ರಕರಣಗಳು ಕಳೆದ ವರ್ಷ ಅದೇ ಶಾಲೆಯ ಇನ್ನೊಬ್ಬ ಶಿಕ್ಷಕನ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿವೆ ಎಂದು ಪೊಲೀಸರು ಜೋಶಿ ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಪಕ್ಷಗಳು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಪ್ರಕರಣದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸದಿದ್ದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.