ಗಣರಾಜ್ಯೋತ್ಸವ ತಯಾರಿ: ಸರಕಾರಿ ಶಾಲಾ ವಿದ್ಯಾರ್ಥಿ ದುರ್ಮರಣ
1 min readಚಿಕ್ಕಬಳ್ಳಾಪುರ: ಗಣರಾಜ್ಯೋತ್ಸವದ ತಯಾರಿಗಾಗಿ ಶಿಕ್ಷಕರು ಬರುವ ಮುನ್ನವೇ ಆಯಾಗಳಿಗೆ ಸಹಾಯ ಮಾಡಲು ಹೋದ 5ನೇ ತರಗತಿ ವಿದ್ಯಾರ್ಥಿಯೋರ್ವ ವಿದ್ಯುತ್ ಅವಘಡದಿಂದ ಸಾವಿಗೀಡಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಶೆಟ್ಟಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದಿದೆ.
ಗಣರಾಜ್ಯೋತ್ಸವದ ಪೂರ್ವ ತಯಾರಿ ನಡೆಸುವ ವೇಳೆಯಲ್ಲಿ ಶಾಲೆಯ ಮೈದಾನದಲ್ಲಿ ನೀರಿನ ತೊಟ್ಟಿಯಲ್ಲಿ ನೀರು ತರಲು ಹೋದ ಸಮಯದಲ್ಲಿ 5ನೇ ತರಗತಿ ವಿದ್ಯಾರ್ಥಿ ನಂದೀಶ ಶಂಕರೆಪ್ಪ ಎಂಬ 11 ವರ್ಷದ ಬಾಲಕ ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾನೆ.
ನೀರು ತೆಗೆದುಕೊಳ್ಳುವ ಸಮಯದಲ್ಲಿ ಕೈಯಲ್ಲಿದ್ದ ಪ್ಲಾಸ್ಟಿಕ್ ಡಬ್ಬಿ ನೀರಲ್ಲಿ ಬಿದ್ದಿದೆ. ಅದನ್ನ ತೆಗೆದುಕೊಳ್ಳಲು ಕೆಳಗೆ ಇಳಿದಾಗ, ಕಬ್ಬಿಣದ ದಂಡವನ್ನ ಹಿಡಿದಿದ್ದಾನೆ. ಅಲ್ಲಿದ್ದ ಮೋಟಾರನಲ್ಲಿ ಹರಿಯುತ್ತಿದ್ದ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.
ನಂದೀಶನ ಸಾವಿನ ಸುದ್ದಿಯಿಂದ ಕಂಗಾಲಾದ ಕುಟುಂಬ ಮೈದಾನದಲ್ಲಿ ಗೋಳಾಡುತ್ತಿದ್ದರು. ಸ್ಥಳಕ್ಕೆ ಬಿಇಓ ಸುರೇಶಕುಮಾರ ಆಗಮಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಸ್ಥಳ ಪರಿಶೀಲನೆ ನಡೆಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪದಾಧಿಕಾರಿಗಳು ಮೃತ ವಿದ್ಯಾರ್ಥಿಗೆ ಅಂತಿಮ ನಮನ ಸಲ್ಲಿಸಿದರು.