ಆಟವಾಡಲು ಹೋಗಿದ್ದ ವಿದ್ಯಾರ್ಥಿ ದುರ್ಮರಣ

ಹಾವೇರಿ: ಜಿಲ್ಲೆಯ ಸವಣೂರ ನಗರದಲ್ಲಿ ಆಟ ಆಡಲು ಹೋಗಿ ಶವವಾಗಿದ್ದ ವಿದ್ಯಾರ್ಥಿಯೋರ್ವ ಶವವಾಗಿ ಮರಳಿದ ಘಟನೆ ಮೋತಿ ತಲಾಬದಲ್ಲಿ ನಡೆದಿದ್ದು, ಇದಕ್ಕೆ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆನ್ನಲಾಗಿದೆ.
ಸವಣೂರ ನಗರದ ನಿವಾಸಿಯಾದ ಗಣೇಶ್ ಬಾದಾಮಿ ಅವರ ಮಗನಾದ ಹನುಮಂತಪ್ಪ ಬಾದಾಮಿ ಮೃತಪಟ್ಟ ಬಾಲಕನಾಗಿದ್ದು, ಆಟವಾಡಲು ಹೋಗಿ ನೀರಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ಸವಣೂರ ನಗರದ ಮೂತಿ ತಲಾಬ್ ನಲ್ಲಿ ನಡೆದಿದೆ.
ಹಾನಗಲ್ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಮುನ್ನಾ ಗೌಡಗೇರಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪರಶುರಾಮ್ ಇಳಿಗೇರ ಆರೋಪಿಸಿದರು.
ಸಣ್ಣ ನೀರಾವರಿ ಇಲಾಖೆಗೆ ಸಂಬಂಧಪಟ್ಟಂತಹ ಕೆರೆಗಳಿಗೆ ತಂತಿಬೇಲಿ ಅಳವಡಿಸಬೇಕೆಂದು ಸರ್ಕಾರದ ಆದೇಶವಿದೆ. ಆದರೆ, ಸರ್ಕಾರದ ಆದೇಶವನ್ನು ಇಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇವರ ನಿರ್ಲಕ್ಷತನದಿಂದ ಪ್ರತಿ ವರ್ಷವೂ ಒಬ್ಬರನ್ನು ಬಲಿ ತೆಗೆದುಕೊಳ್ಳುತ್ತಾ ಬಂದಿದೆ ಎಂದು ದೂರಿದ್ದಾರೆ.
ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಕಡಿವಾಣವಿಲ್ಲದ ಕುದುರೆಯಂತೆ ಆಗಿದ್ದಾರೆ ಎಂದು ಪರಶುರಾಮ ಇಳಿಗೇರ ಆರೋಪಿಸಿದರು. ಅಷ್ಟೇ ಅಲ್ಲದೇ ಕೆರೆ ಅಭಿವೃದ್ಧಿಗೆ ಬಂದಂತ ಹಣ ಯಾರ ಜೇಬಿಗೆ ಹೋಗುತ್ತಿದೆ ಎಂದು ಪ್ರಶ್ನೆ ಮಾಡಿದರು.
ಸರ್ಕಾರದವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮೃತಪಟ್ಟ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಅವರು, ಸೂಕ್ತ ಪರಿಹಾರ ಸಿಗದೇ ಇದ್ದರೇ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.