ಹುಬ್ಬಳ್ಳಿಯಲ್ಲಿ ಒಡಹುಟ್ಟಿದವನ ಅಟ್ಟಹಾಸ: ಅಣ್ಣನಿಗೆ 7 ಬಾರಿ ಚಾಕು ಇರಿದು ಕ್ರೌರ್ಯ ಮೆರೆದ ತಮ್ಮ…
ಹುಬ್ಬಳ್ಳಿ: ಕ್ಷುಲ್ಲಕ ಕಾರಣ ಹಾಗೂ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಅಣ್ಣನ ಮೇಲೆಯೇ ತಮ್ಮನು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹಳೇಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ನಡೆದಿದೆ.
ಶಿವಶಂಕರ ಕಾಲೋನಿಯ ನಿವಾಸಿ ಮಲ್ಲೇಶ್ ಪೂಜಾರ (42) ಎಂಬುವವರ ಮೇಲೆ ಅವರ ಸ್ವಂತ ತಮ್ಮ ಪ್ರದೀಪ್ ಎಂಬಾತ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಗಾಯಾಳು ಮಲ್ಲೇಶ್ ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಗುರುವಾರ ಬೆಳಿಗ್ಗೆ ಮಲ್ಲೇಶ್ ಅವರು ತಮ್ಮ ಮನೆಯ ಎದುರು ಕುಳಿತಿದ್ದಾಗ, ಕುಡಿದ ಅಮಲಿನಲ್ಲಿ ಅಲ್ಲಿಗೆ ಬಂದ ಪ್ರದೀಪ್ ಹಳೆಯ ವಿಷಯಗಳನ್ನು ತೆಗೆದು ಜಗಳ ಆರಂಭಿಸಿದ್ದಾನೆ. ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಪ್ರದೀಪ್, ತನ್ನ ಬಳಿಯಿದ್ದ ಚಾಕುವಿನಿಂದ ಅಣ್ಣನ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಬರೋಬ್ಬರಿ 7 ಬಾರಿ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲ್ಲೇಶ್ ಅವರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮಲ್ಲೇಶ್ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಪ್ರದೀಪ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
