ಶ್ರೀರಾಮುಲು ಯೂಟರ್ನ್: ಕೊಟ್ಟಿದ್ದನ್ನ ನಿಭಾಯಿಸ್ತೇನಿ ಅಂದ್ರು
1 min readಬೆಂಗಳೂರು: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಯೂಟರ್ನ್ ಹೊಡೆದಿದ್ದಾರೆ. ಆರೋಗ್ಯ ಇಲಾಖೆಯನ್ನು ಹಿಂದಕ್ಕೆ ಪಡೆದುಕೊಂಡು ಸಮಾಜಕಲ್ಯಾಣ ಇಲಾಖೆಯನ್ನು ಮರು ಹಂಚಿಕೆ ಮಾಡಿದ್ದಕ್ಕೆ ಶ್ರೀರಾಮುಲು ಅಸಮಾಧಾನಗೊಂಡಿದ್ದರು. ರಾಜ್ಯಪಾಲರ ಅಂಕಿತದ ಬಳಿಕ ಖಾತೆ ಹಂಚಿಕೆ ಅಧಿಕೃತವಾದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಗೆ ಆಗಮಿಸಿದ್ದ ಶ್ರೀರಾಮುಲು ಅವರು ಅಸಮಾಧಾನದಿಂದ ತಮ್ಮ ಖಾಸಗಿ ಕಾರಿನಲ್ಲಿ ಖಾಸಗಿ ನಿವಾಸಕ್ಕೆ ತೆರಳಿದ್ದರು.
ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆರೋಗ್ಯ ಸಚಿವ ಡಾ. ಸುಧಕರ್ ಅವರೊಂದಿಗೆ ಭೇಟಿಯಾಗಿರುವ ಶ್ರೀರಾಮುಲು ತಮಗೆ ವಹಿಸಿರುವ ಸಮಾಜ ಕಲ್ಯಾಣ ಇಲಾಖೆಯನ್ನು ಒಪ್ಪಿಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯನ್ನು ಒಪ್ಪಿಕೊಳ್ಳುವ ಮೂಲಕ ಶ್ರೀರಾಮುಲು ಯುಟರ್ನ್ ಹೊಡೆದಿದ್ದಾರೆ.
ಖಾತೆ ಹಂಚಿಕೆ ಗೊಂದಲದ ಬಳಿಕ ಆರೋಗ್ಯ ಸಚಿವ ಡಾ. ಸುಧಾಕರ್ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಡಾ. ಸುಧಾಕರ್ ಬಳಿ ಎರಡೂ ಖಾತೆ ಇದ್ದರೆ ಸುಧಾರಣೆ ಸಾಧ್ಯ ಅಂತಾ ಆರೋಗ್ಯ ಖಾತೆಯನ್ನೂ ಅವರಿಗೆ ವಹಿಸಿದ್ದಾರೆ. ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಈಗ ತಾನೇ ಸುಧಾಕರ್ ಮತ್ತು ನನ್ನ ಕರೆದು ಸಿಎಂ ಯಡಿಯೂರಪ್ಪ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಬೇಕೆಂಬ ಸಲಹೆ ಕೊಟ್ಟಿದ್ದಾರೆ ಎಂದು ಶ್ರೀರಾಮುಲು ಹೇಳಿಕೆ ಕೊಟ್ಟಿದ್ದಾರೆ. ಹಿಂದೆ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನನಗೆ ಆರೋಗ್ಯ ಇಲಾಖೆ ಕೊಟ್ಟಿದ್ದರು. ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ತೆಗೆದುಕೊಂಡಿರುವ ನಿರ್ಧಾರದಂತೆ ನಾನು ಸಂತೋಷದಿಂದ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಆರೋಗ್ಯ ಇಲಾಖೆಯನ್ನು ಡಾ. ಸುಧಾಕರ್ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ಆರೋಗ್ಯ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದೀರಾ ಎಂಬ ಮಾಧ್ಯಮ ಪ್ರತಿನಿಧಿಗಳಿಗೆ ನೇರವಾಗಿ ಶ್ರೀರಾಮುಲು ಅವರು ಉತ್ತರಿಸಲಿಲ್ಲ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಾಗಿದೆ. ಹಾಗಂತ ಡಾ. ಸುಧಾಕರ್ ವಿಫಲರಾಗಿದ್ದಾರೆ ಎಂತಾ ಹೇಳೊದಕ್ಕೆ ಆಗುತ್ತದೆಯಾ ಎಂದು ಮಾಧ್ಯಮದವರನ್ನು ರಾಮುಲು ಪ್ರಶ್ನೆ ಮಾಡಿದರು. ಮತ್ಯಾಕೆ ನಿಮ್ಮನ್ನು ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲಾಗಿದೆ ಎಂಬುದಕ್ಕೆ ಅವರಲ್ಲಿ ಉತ್ತರವಿರಲಿಲ್ಲ.
ನಾನು ಸಮಾಜ ಕಲ್ಯಾಣ ಇಲಾಖೆ ಬೇಕು ಅಂತಾ ಹಿಂದೆಯೇ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೆ. ಸುಧಾಕರ್ ವೈದ್ಯರು. ಹೀಗಾಗಿ ಸಿಎಂ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ಅವರಿಗೆ ವಹಿಸಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದಲೂ ನಾನು ಮುಖ್ಯಮಂತ್ರಿಗಳಿಗೆ ಬೆಂಬಲ ಕೊಟ್ಟಿದ್ದೇನೆ ಎಂದು ವಿವರಿಸಿದರು.
ಪರಿಶಿಷ್ಟ ಜಾತಿ ಕಲ್ಯಾಣ ಆಗಬೇಕೇಂದು ಸಮಾಜ ಕಲ್ಯಾಣ ಇಲಾಖೆಯನ್ನು ಸಚಿವ ಶ್ರೀರಾಮುಲು ಅವರಿಗೆ ಸಿಎಂ ಯಡಿಯೂರಪ್ಪ ನೀಡಿದ್ದಾರೆ. ನೀರಾವರಿ ನಂತರದ ದೊಡ್ಡ ಇಲಾಖೆ ಅದು. ಇದು ಶ್ರೀರಾಮುಲು ಅವರಿಗೆ ಆಗಿರುವ ಪ್ರಮೋಷನ್, ಡಿಮೋಷನ್ ಅಲ್ಲ. ಖಾತೆ ಬದಲಾವಣೆಗೆ ಮೊದಲು ಈ ವಿಚಾರವನ್ನು ನನಗೆ ಹಾಗೂ ಶ್ರೀರಾಮುಲು ಇಬ್ಬರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದರು ಎಂದು ನೂತನ ಆರೋಗ್ಯ ಸಚಿವ ಸುಧಾಕರ್ ವಿವರಿಸಿದರು.
ಜೊತೆಗೆ ಸಮಾಜ ಕಲ್ಯಾಣ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಲು ಸಚಿವ ಶ್ರೀರಾಮುಲು ಅವರಿಗೂ ಸೂಚಿಸಿದ್ದಾರೆ ಎಂದು ಡಾ. ಸುಧಾಕರ್ ಮಾತನಾಡಿದರು.