ದುಬೈಗೆ ಹೊರಟ ಮರೇವಾಡದ “ಕ್ರೀಡಾಪಟು”- 75 ವರ್ಷದ ಶಿವಪ್ಪರಿಗೆ ಸಹಾಯ ಮಾಡಿ…
1 min readಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಹಿರಿಯ ನಾಗರಿಕ ಎಸ್.ಎಂ. ಸಲಕಿ ಆರ್ಥಿಕವಾಗಿ ಪ್ರೋತ್ಸಾಹ ನೀಡಲು ಕೋರಿಕೆ
ಧಾರವಾಡ: ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಹಿರಿಯ ನಾಗರಿಕ ಎಸ್.ಎಂ. ಸಲಕಿ ಅವರು ಇದೇ ಜು.31 ರಿಂದ ಆ.07 ವರೆಗೆ ದುಬೈನಲ್ಲಿ ಜರುಗಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ಧಾರವಾಡ ತಾಲೂಕಿನ ಮರೇವಾಡ ಗ್ರಾಮದವರಾದ ಕ್ರೀಡಾಪಟು ಶಿವಪ್ಪ ಸಲಕಿ ಅವರು, ಭಾರತದ ಮಧ್ಯಪ್ರದೇಶದ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಶಿವಪ್ಪ ಅವರು 75 ಕ್ಕೂ ವರ್ಷ ಮೇಲ್ಪಟ್ಟ ನಾಗರಿಕರ ಕ್ರೀಡಾಕೂಟದಲ್ಲಿ 400 ಮೀ., 800 ಮೀ ಮತ್ತು 1500 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ತಮ್ಮ 17 ನೇ ವಯಸ್ಸಿನಲ್ಲಿ ಓಟದ ಗೀಳು ಹಚ್ಚಿಕೊಂಡ ಅವರು, ಇಂದಿನವರೆಗೂ ಪ್ರತಿ ದಿನ ಓಟ, ಯೋಗ ಮಾಡುವುದನ್ನು ಮುಂದುವರೆಸಿದ್ದಾರೆ. ಬೆಳಗ್ಗೆ 4 ಗಂಟೆಗೆ ಎದ್ದು 10 ಕಿ.ಮೀ. ಓಟವನ್ನು ಪೂರ್ಣಗೊಳಿಸುತ್ತಿದ್ದಾರೆ.
ರಾಜ್ಯಮಟ್ಟದ 26 ಕ್ಕೂ ಅಧಿಕ, ರಾಷ್ಟ್ರ ಮಟ್ಟದ 20 ವಿವಿಧ ಕ್ರೀಟಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಮಲೇಶಿಯಾ, ನೇಪಾಳಗಳಲ್ಲಿ ಜರುಗಿದ ಹಿರಿಯ ನಾಗರಿಕರ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಿಟ್ಟಿಸಿದ್ದು ಇವರ ಹಿರಿಮೆ. ಈ ಮೂಲಕ ಧಾರವಾಡ ತಾಲೂಕಿನ ಗೌರವವನ್ನು ಶಿವಪ್ಪ ಸಲಕಿ ಹೆಚ್ಚಿಸಿದ್ದಾರೆ.
ಎಸ್.ಎಸ್.ಎಲ್.ಸಿ ವರೆಗೆ ಓದಿರುವ ಶಿವಪ್ಪ, ಕಳೆದ ಮೇ. 26 ರಿಂದ 28 ವರೆಗೆ ದೆಹಲಿಯಲ್ಲಿ ಜರುಗಿದ ಎಸ್.ಬಿ.ಕೆ.ಎಫ್. ೮ ನೇ ನ್ಯಾಶನಲ್ ಗೇಮ್ಸ್ ನಲ್ಲಿ ಭಾಗವಹಿಸಿ 400 ಮೀ., 800 ಮೀ ಮತ್ತು 1500 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದೇಶ-ವಿದೇಶಗಳಲ್ಲಿ ತಮ್ಮ ಸಾಧನೆ ಮೆರೆದಿರುವ ಇವರು ಇದೀಗ ದುಬೈನಲ್ಲಿ ಜರುಗಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ 2007 ರಲ್ಲಿ ನಿವೃತ್ತರಾಗಿದ್ದಾರೆ. ತಮ್ಮ ಅಲ್ಪ ಮೊತ್ತದ ಪಿಂಚಣಿ ಹಣವನ್ನು ಸಹ ತಮ್ಮ ಓಟದ ಹವ್ಯಾಸಕ್ಕಾಗಿ ಉಪಯೋಗಿಸುತ್ತ ಬಂದಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತ, ವಿವಿಧ- ಸಂಘ ಸಂಸ್ಥೆಗಳು ಆರ್ಥಿಕ ನೆರವು ಒದಗಿಸಿ ಪ್ರೋತ್ಸಾಹಿಸುತ್ತ ಬಂದಿವೆ. ಅಲ್ಲದೇ ಅನೇಕ ಕ್ರೀಡಾಪ್ರೇಮಿಗಳು ಕೂಡ ತಮ್ಮ ಶಕ್ತ್ಯಾನುಸಾರ ಸಹಾಯ ಮಾಡುತ್ತ ಬಂದಿದ್ದಾರೆ.
ಸರಕಾರ ಇಂತಹ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಕಲ್ಪಿಸುವ ಮುಖಾಂತರ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಇದರಿಂದ ಮತ್ತಷ್ಟು ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದೆ.
ದುಬೈನಲ್ಲಿ ಜರುಗಲಿರುವ ಹಿರಿಯರ ಕ್ರೀಡಾಕೂಟಕ್ಕೆ ತೆರಳಲು ನಾಡಿನ ಪ್ರತಿಷ್ಠಿತ ವಿ.ಆರ್.ಎಲ್.ಸಮೂಹ ಸಂಸ್ಥೆ ಮತ್ತು ಹಲವಾರು ಸಹೃದಯರು ಧನ ಸಹಾಯ ಮಾಡುತ್ತಿದ್ದಾರೆ. ವಿದೇಶದಲ್ಲಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅಧಿಕ ಪ್ರಮಾಣದ ಖರ್ಚು ತಗಲುವುದರಿಂದ ಶಿವಪ್ಪ ಸಲಕಿಯಂತಹ ಹಿರಿಯ ಕ್ರೀಡಾಪಟುವಿಗೆ ನೆರವು ನೀಡಿ ಪ್ರೋತ್ಸಾಹಿಸಬೇಕು.
ಆಸಕ್ತರು
ಶಿವಪ್ಪ ಮಹಾಂತಪ್ಪ ಸಲಕಿ.
ಬ್ಯಾಂಕ್ ಖಾತೆ ಸಂ. 12572250022113
ಐಎಫ್‌ಎಸ್‌ಸಿ ನಂಬರ- ಸಿಎನ್‌ಆರ್‌ಬಿ 0011257
ಕೆನರಾ ಬ್ಯಾಂಕ್, ತಿಮ್ಮಾಪೂರ ಶಾಖೆ.
ಸುದ್ದಿಗೋಷ್ಠಿಯಲ್ಲಿ ಈಶ್ವರ ಶಿವಳ್ಳಿ, ಪರಮೇಶ್ವರ ಉಳವಣ್ಣವರ, ಬಸವರಾಜ ಚವಡಿಮನಿ, ಸುರೇಶ ತಡಕೋಡ, ಮುರಘೇಶ ಧನಶೆಟ್ಟಿ, ಅನಿತಾ ಮಟ್ಟಿ, ಶಿವಪ್ಪ ಸಲಕಿ ಕ್ರೀಡಾಪಟು ಉಪಸ್ಥಿತರಿದ್ದರು.