ಕಪ್ಪು-ಬಸಿ ತೊಳೆದು ಮನೆ ಮನೆಗೆ ಪೇಪರ್ ಹಾಕಿದ್ದ ‘ಪ್ರಕಾಶ’: ಸಾರ್ಥಕತೆಗೆ ಸಿಕ್ಕ ಜಿಲ್ಲಾ ಪ್ರಶಸ್ತಿ ಗೌರವ
ಹುಬ್ಬಳ್ಳಿ: ಮನೆ ಮಾಲಿಕತ್ವದ ಹೊಟೇಲ್ ನಲ್ಲಿ ಕಾರ್ಯನಿರ್ವಹಿಸುತ್ತಲೇ ಮನೆ ಮನೆಗೆ ಪೇಪರ್ ಹಾಕುತ್ತಿದ್ದ ಯುವಕನೋರ್ವ ತಾನಿಷ್ಟಪಟ್ಟ ಕ್ಷೇತ್ರದಲ್ಲೇ ಬೆಳೆದು ಇದೀಗ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನ ಪಡೆಯುತ್ತಿರುವುದು ಸಂತೋಷದ ವಿಷಯವಾಗಿದೆ.
ಸಧ್ಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರರಾಗಿರುವ ಪ್ರಕಾಶ ಶೇಟ್, ಇದೀಗ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಕಾಶ ಶೇಟ್ ಮೂಲತಃ ಜೋಯಿಡಾದವರು. ಮನೆಯವರು ಹೊಟೇಲ್ ನಡೆಸುತ್ತಿದ್ದರಿಂದ ಬದುಕು ಅಲ್ಲೇ ಜಿಗುರೊಡೆದಿತ್ತು. ಆದರೆ, ಬರವಣಿಗೆಯ ಹಸಿವು ಅವರನ್ನ ಬೇರೆಯದ್ದೇ ದಾರಿಗೆ ತೆಗೆದುಕೊಂಡು ಹೋಗಿತ್ತು. ಅಕ್ಷರದ ಹಿಂದೆ ಬಿದ್ದ ಬಹುತೇಕರು ಮಾಡಿದ ಮನೆ ಮನೆಗೆ ಪೇಪರ್ ಹಾಕುವ ಕೆಲಸವನ್ನ ಇವರು ಮಾಡಿದ್ರು.
ಯಾವ ಪತ್ರಿಕೆಯನ್ನ ಮನೆ ಮನೆಗೆ ಹಾಕೋತ್ತಿದ್ದರೋ ಅದೇ ಲೋಕಧ್ವನಿ ಪತ್ರಿಕೆಯಲ್ಲಿ ಬಿಡಿ ವರದಿಗಾರನಾಗಿ, ಮಾಧ್ಯಮ ಲೋಕಕ್ಕೆ ಎಂಟ್ರಿಯಾದರು. ನಂತರ ಜೋಯಿಡಾಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಬಿಡಿ ವರದಿಗಾರರಾಗಿ ಸೇವೆ ಸಲ್ಲಿಸಿದ್ರು. ಇಲ್ಲಿಂದ ಜೀವನ ಬೇರೆಯದ್ದೇ ದಾರಿಯನ್ನ ತೋರಿಸಿತು. ಅದಕ್ಕೆ ಕಾರಣವಾಗಿದ್ದು ಇಂದಿನ ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ ಕೋಣೆಮನೆ.
ಹೌದು.. ಉಷಾಕಿರಣ ಪತ್ರಿಕೆಯಲ್ಲಿ ಪ್ರಕಾಶ ಶೇಟ್ ಅವರಿಗೆ ಕೆಲಸ ದೊರೆತ ನಂತರ ಮಾಧ್ಯಮ ಲೋಕದಲ್ಲಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದರು. ಉಷಾಕಿರಣ, ವಿಜಯಕರ್ನಾಟಕ, ವಿಶ್ವವಾಣಿ, ಕನ್ನಡಪ್ರಭಗಳಲ್ಲಿಯೂ ಕೆಲಸ ಮಾಡಿ, ಇದೀಗ ಸಂಯುಕ್ತ ಕರ್ನಾಟಕ ಪತ್ರಿಕೆಯ ಹುಬ್ಬಳ್ಳಿ ಬ್ಯೂರೋದಲ್ಲಿ ಮುಖ್ಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ತಂದೆ ಸದಾನಂದ ಮತ್ತು ತಾಯಿ ಅಂಜನಿ ಜೋಯಿಡಾದಲ್ಲಿರುತ್ತಾರೆ. ಈಗಲೂ ಪ್ರಕಾಶ ಶೇಟ್ ಸಹೋದರ ಹೊಟೇಲ್ ನಡೆಸುತ್ತಾರೆ. ಪ್ರಕಾಶ ಶೇಟ್ ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಾಧ್ಯಮಲೋಕದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
ತನಿಗಿಷ್ಟವಾದ ಕೆಲಸದ ಹಿಂದೆ ನಿಷ್ಠೆಯಿದ್ದರೇ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಕಪ್ಪು-ಬಸಿ ತೊಳೆಯುತ್ತಲೇ ಬದುಕು ಕಟ್ಟಿಕೊಂಡು, ತಮ್ಮಿಷ್ಟದ ಕ್ಷೇತ್ರದಲ್ಲೇ ಹೆಸರು ಮಾಡಿ ಪ್ರಶಸ್ತಿ ಪಡೆಯುತ್ತಿರುವ ಪ್ರಕಾಶ ಶೇಟ್ ಉದಾಹರಣೆಯಾಗಿ ನಿಲ್ಲುತ್ತಾರೆ.
ವೆಲ್ ಡನ್ ಪ್ರಕಾಶ ಶೇಟ್..!