ಪ್ರೋಗ್ರೆಸ್ಸಿವ್ ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್.ಬಿ.ದೊಡ್ಡಮನಿ ನಿಧನ…!
1 min readಶಿರಸಿ: ನಗರದ ಸಂಯುಕ್ತ ಪ್ರೋಗ್ರೆಸ್ಸಿವ್ ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್.ಬಿ.ದೊಡ್ಡಮನಿ ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದರೂ ಕೂಡಾ ಸಮಾಜ ಸೇವೆಯ ಮನೋಭಾವ ಹೊಂದಿದ್ದ ವ್ಯಕ್ತಿಯಾಗಿದ್ದರು. ಉತ್ತರಕನ್ನಡ ಜಿಲ್ಲೆಯಲ್ಲಿ ದಲಿತರು ಹಾಗೂ ಹಿಂದುಳಿದವರು, ಶೋಷಣೆಗೊಳಗಾದವರ ಪರ ಹೆಚ್ಚಿನ ಹೋರಾಟಗಳನ್ನು ಮಾಡಿದ್ದರು.
ಸುಮಾರು 30 ವರ್ಷಗಳ ಹಿಂದೆ ಉತ್ತರಕನ್ನಡ ಜಿಲ್ಲೆಗೆ ಮೊಟ್ಟಮೊದಲು ದಲಿತ ಪರ ಸಂಘಟನೆಯನ್ನು ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ದಲಿತರ ಪರವಾಗಿ ದಲಿತರ ಹಕ್ಕಿಗಾಗಿ ದಲಿತರ ಪರ ದ್ವನಿಯಾಗಿ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲು ಸ್ಥಾಪನೆಗೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯಲ್ಲಿ ಸಂಘಟನೆ ಕಟ್ಟಿ ಎಷ್ಟೋ ದಲಿತ ಪರ ಹೋರಾಟಗಳಿಗೆ ಸಾಕ್ಷಿಯಾಗಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಕೃಷ್ಣಪ್ಪನವರು ನಿಧನರಾದ ನಂತರ ಒಂದೇ ಇದ್ದ ದಲಿತಪರ ಸಂಘಟನೆ ಹಲವಾರು ಬಣಗಳಾಗಿ ಹೋದವು. ಇದರಲ್ಲಿ ಒಂದಾದ ಡಿ.ಜಿ.ಸಾಗರ ಬಣದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉತ್ತರಕನ್ನಡ ಜಿಲ್ಲಾ ಸಂಚಾಲಕರಾಗಿ ಪ್ರೊ.ಎಸ್.ಬಿ.ದೊಡ್ಡಮನಿ ಅವರು ಜಿಲ್ಲೆಯಾಧ್ಯಂತ ದಲಿತಪರ ಸಂಘಟನೆಯ ಧ್ವನಿ ಹಬ್ಬಿಸಿದರು.
ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಹುದ್ದೆಗಳನ್ನು ಅಲಂಕರಿದ್ದರು.
ಆದರ್ಶವಾದಿ ಮಾರ್ಗದರ್ಶಿಗಳನ್ನು ಕಳೆದುಕೊಂಡ ಶಿಷ್ಯವೃಂದ, ಸಮಾಜದ ಹಲವು ಮುಖಂಡರು ಕಂಬನಿ ಮಿಡಿದು, ಹಿರಿಯ ಗುರುಗಳ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.