ಸಿದ್ಧರಾಮಯ್ಯ ವಕೀಲರಾಗ್ತಾರಂತೆ: ಫೆಬ್ರುವರಿಗೆ ರೆಡಿ….”ಮೈ ಲಾರ್ಡ್”

ಬೆಂಗಳೂರು:
ರಾಜ್ಯ ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೂಲ ವೃತ್ತಿಯಾದ ವಕೀಲಿ ವೃತ್ತಿಯನ್ನ ಆರಂಭಿಸಲು ನಿರ್ಧರಿಸಿದ್ದಾರೆ.
೧೯೮೨ ರವರೆಗೆ ಮೈಸೂರಿನಲ್ಲಿ ವಕೀಲಿ ವೃತ್ತಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಗೆದ್ದು ಶಾಸಕರಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದರು. ಇಂದಿಗೂ ಮೈಸೂರ್ ಬಾರ್ ಕೌನ್ಸಿಲ್‌ನ ಆಜೀವ ಸದಸ್ಯರಾಗಿದ್ದಾರೆ.
ಮುಖ್ಯಮಂತ್ರಿ ಆಗುವವರೆಗೂ ಬಾರ್ ಕೌನ್ಸಿಲ್‌ನ ಎನ್‌ರೋಲ್‌ಮೆಂಟನ್ನ ಹೊಂದಿದ್ದ ಸಿದ್ದರಾಮಯ್ಯ, ಸಿಎಂ ಆಗುತ್ತಿದ್ದಂತೆ ತಮ್ಮ ಎನ್‌ರೋಲ್‌ಮೆಂಟ್ ಕಾರ್ಡನ್ನ ಬಾರ್ ಕೌನ್ಸಿಲ್ಲಿಗೆ ಸರೆಂಡರ್ ಮಾಡಿ ತಮ್ಮ ಸನ್ನದನ್ನ ಅಮಾನತ್ತಿನಲ್ಲಿ ಇರಿಸಿದ್ದರು.
ಆದ್ರೀಗ ತಮ್ಮ ಎನ್‌ರೋಲ್‌ಮೆಂಟ್ ಕಾರ್ಡನ್ನ ರಿನಿವಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಸಿದ್ದರಾಮಯ್ಯ. ಆ ಸರೆಂಡರ್ ಮಾಡಿ ಸಸ್ಪೆನ್ಷನ್ ನಲ್ಲಿ ಇಟ್ಟಿದ್ದ ಎನ್‌ರೋಲ್‌ಮೆಂಟ್ ಕಾರ್ಡನ್ನ ರಿನಿವಲ್ ಮಾಡಲು ರಾಜ್ಯ ಬಾರ್ ಕೌನ್ಸಿಲ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಜನವರಿ 22ರ ಬುಧವಾರದಂದು ಮೈಸೂರಿನಲ್ಲಿ ತಮ್ಮ ಆಪ್ತರ ಮುಂದೆಯೆ ಇದನ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇವತ್ತಿನ ಯಾವ ವಿಷಯದ ಬಗ್ಗೆ ಹೋರಾಟ ಮಾಡಲು ನಾನು ರೆಡಿ. ಹೈಕೋರ್ಟ್ ಆಗಲಿ ಸುಪ್ರೀಂಕೋರ್ಟ್ ಆಗಲಿ ವಾದ ಮಾಡೋಕೆ ನಾನು ರೆಡಿ ಎಂದಿದ್ದಾರಂತೆ.
ಕೂಡಲೇ ತಮ್ಮ ಎನ್‌ರೋಲ್‌ಮೆಂಟ್ ಕಾರ್ಡಿನ ಅಮಾನತ್ತನ್ನ ವಾಪಾಸ್ ಪಡೆಯಲು ಮೈಸೂರಿನಲ್ಲಿ ದಾಖಲೆ ಪತ್ರಗಳನ್ನ ತರಿಸಿಕೊಂಡು ಸಹಿ ಮಾಡಿ ಕೊಟ್ಟಿದ್ದಾರೆ.
ಶುಕ್ರವಾರವೇ ರಾಜ್ಯ ಬಾರ್ ಕೌನ್ಸಿಲ್‌ಗೆ ಸಿದ್ದರಾಮಯ್ಯ ಅರ್ಜಿ ಸಲ್ಲಿಕೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಿಲ್ಲ.
ಸಿದ್ಧರಾಮಯ್ತ ಆಪ್ತ ವಲಯದ ವಕೀಲರೊಬ್ಬರ ಬಳಿ ಸಿದ್ದರಾಮಯ್ಯ ದಾಖಲೆಗಳನ್ನ ನೀಡಿ ರಾಜ್ಯ ಬಾರ್ ಕೌನ್ಸಿಲ್‌ಗೆ ಎನ್‌ರೋಲ್‌ಮೆಂಟ್ ರಿನಿವಲ್ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಮುಂದಿನ ಶುಕ್ರವಾರ ಅಂದರೆ ಜನವರಿ ೩೧ ರಂದು ಅಧಿಕೃತವಾಗಿ ಸಿದ್ದರಾಮಯ್ಯರ ಎನ್‌ರೋಲ್‌ಮೆಂಟ್ ರಿನಿವಲ್ ಅರ್ಜಿ ರಾಜ್ಯ ಬಾರ್ ಕೌನ್ಸಿಲ್‌ಗೆ ಸಲ್ಲಿಕೆ ಆಗಲಿದೆ.
ಫೆಬ್ರವರಿಯಿಂದಲೇ ಸಿದ್ಧರಾಮಯ್ಯ ವಕೀಲಿ ವೃತ್ತಿ ಅಧಿಕೃತವಾಗಿ ಆರಂಭವಾಗಲಿದೆ.