ಮಳೆಗಾಲಕ್ಕೂ ಮುನ್ನಾ ಅವಳಿ ನಗರದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಜಗದೀಶ್ ಶೆಟ್ಟರ್ ಸೂಚನೆ
1 min readಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಲೋಕೋಪಯೋಗಿ ಇಲಾಖೆ, ಸಿ.ಆರ್.ಎಫ್. ಹಾಗೂ ವಿಶೇಷ ಅನುದಾನದಡಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗಳನ್ನು ಮಳೆಗಾಲಕ್ಕೂ ಮುನ್ನಾ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ರಾಜೀವ ನಗರದಲ್ಲಿ ಲೋಕೋಪಯೋಗಿ ಇಲಾಖೆ 5 ಕೋಟಿ ಅನುದಾನದಡಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿ ವೀಕ್ಷಿಸಿ ಶೆಟ್ಟರ್ ಮಾತನಾಡಿದರು. ಸರ್ಕಾರ ರಚನೆಯಾದ ಹತ್ತು ತಿಂಗಳಲ್ಲಿ ಅವಳಿ ನಗರದ ಮುಖ್ಯ ಹಾಗೂ ಒಳರಸ್ತೆಗಳನ್ನು ನಿರ್ಮಿಸಿ ನಗರದ ಚಿತ್ರಣ ಬದಲು ಮಾಡುವ ಆಶಯ ಸರ್ಕಾರಕ್ಕೆ ಇತ್ತು. ಕೊರೋನಾದಿಂದಾಗಿ ತಾತ್ಕಾಲಿಕವಾಗಿ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಲಾಕ್ ಡೌನ್ ಸಡಿಲವಾದ ನಂತರ ಈ ಕಾಮಗಾರಿಗಳಿಗೆ ಮರು ಚಾಲನೆ ನೀಡಲಾಗಿದೆ. ಎಂದರು.
ಲೋಕೋಪಯೋಗಿ ಇಲಾಖೆಯ 35 ಕೋಟಿ ಅನುದಾನದಲ್ಲಿ ಹುಬ್ಬಳ್ಳಿ ನಗರದ ಪ್ರಮುಖ ಏರಿಯಾಗಳ ಒಳ ರಸ್ತೆಗಳನ್ನು ಮುಖ್ಯ ರಸ್ತೆಗೆ ಸಂಪರ್ಕಿಸುವ ಕಾರ್ಯ ಮಾಡಲಾಗುತ್ತಿದೆ. ನೆರೆಯಲ್ಲಿ ಹಾನಿಯಾದ ಸೇತುವೆಗಳ ನಿರ್ಮಾಣಕ್ಕಾಗಿ 8 ಕೋಟಿ ವಿಶೇಷ ಅನುದಾನ ಸಹ ನೀಡಲಾಗಿದೆ. ಇದರಲ್ಲಿ 3 ಸೇತುವೆಗಳ ಕಾರ್ಯ ಪೂರ್ಣಗೊಂಡಿದೆ. ವಾರ್ಡ್ ನಂಬರ್ 35 ರಲ್ಲಿ 15 ಕೋಟಿ ವೆಚ್ಚದಲ್ಲಿ ಎಲ್ಲಾ ರಸ್ತೆಗಳ ನಿರ್ಮಾಣ, ಡಾಂಬರೀಕರಣ ಹಾಗೂ ಕಾಂಕ್ರೀಟಿಕರಣಕ್ಕೆ ಚಾಲನೆ ನೀಡಲಾಗಿದೆ. ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳ ಅಗಲೀಕರಣ, ವರ್ತುಲ ರಸ್ತೆ ಕಾಮಗಾರಿಗಳು ಬಹುತೇಕ ಮುಗಿಯುವ ಹಂತಕ್ಕೆ ಬಂದಿವೆ. ಪ್ಲೈ ಓವರ್ ಹಾಗೂ ಒವರ್ ಬ್ರಿಡ್ಜ್ ಗಳ ನಿರ್ಮಾಣ ಬಾಕಿ ಇವೆ ಎಂದರು.
ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣಕ್ಕೆ ಟೆಂಡರ್
ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಹುಬ್ಬಳ್ಳಿ ರಾಣಿ ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣಕ್ಕೆ ಹಸಿರು ನಿಶಾನೆ ತೊರಿಸಿದ್ದು, 350 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಅಂದಾಜು 850 ರಿಂದ 900 ಕೋಟಿ ವೆಚ್ಚದ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಹುಬ್ಬಳ್ಳಿ ಧಾರವಾಡ ಮಧ್ಯದ 2 ಪಥದ ಹೆದ್ದಾರಿಯನ್ನು ಆರು ಪಥದ ರಸ್ತೆಯನ್ನಾಗಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿ.ವಿ.ಪಾಟೀಲ್, ಪಾಲಿಕೆ ಮಾಜಿ ಸದಸ್ಯ ಮಹೇಶ್ ಬುರಲಿ ಹಾಗೂ ಗುತ್ತಿಗೆದಾರ ಎಂ.ಬಿ.ಕಲ್ಲೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.