“ಬುದ್ಧಿವಂತ ಸಿನೇಮಾ ಎಫೆಕ್ಟ್” 15 ಮದುವೆಯಾಗಿದ್ದ ಭೂಪ ಅಂದರ್…

ಮದುವೆಯಾಗದೇ ಉಳಿದವರನ್ನ ಟಾರ್ಗೆಟ್ ಮಾಡುತ್ತಿದ್ದ ಆಸಾಮಿ
ಡಾಕ್ಟರ್, ಇಂಜಿನಿಯರ್, ಕಾಂಟ್ರ್ಯಾಕ್ಟರ್ ಎಂದು ನಂಬಿಸುತ್ತಿದ್ದ ಬುದ್ಧಿವಂತ
ಮೈಸೂರು: ಐಷಾರಾಮಿ ಜೀವನ ನಡೆಸುವ ಕನಸು ಕಂಡಿದ್ದ ಮೋಸಗಾರನೋರ್ವ ಚಿನ್ನಾಭರಣ ದೋಚಲು ಮಧ್ಯ ವಯಸ್ಸಿನ, ವಿಧವೆಯರನ್ನೇ ಟಾರ್ಗೆಟ್ ಮಾಡಿ ಮದುವೆಯಾಗಿ ದೋಖಾಗೊಳಿಸುತ್ತಿದ್ದ ಪ್ರಕರಣ ಪತ್ತೆಯಾಗಿದೆ.
ಮಹಿಳೆಯರನ್ನ ನಂಬಿಸಿ ಮದುವೆಯಾಗಿ ನಗದು, ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಆರೋಪಿಯನ್ನ ಹೆಡೆಮುರಿ ಕಟ್ಟುವಲ್ಲಿ ಕುವೆಂಪುನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಬನಶಂಕರಿ ಬಡಾವಣೆ ನಿವಾಸಿ ಮಹೇಶ್ (35) ಬಂಧಿತನಾಗಿದ್ದು, ಬಂಧಿತನಿಂದ 2 ಲಕ್ಷ ನಗದು, 2 ಕಾರ್, ಒಂದು ಬ್ರೇಸ್ ಲೈಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಮೈಸೂರಿನ ನಿವಾಸಿ ಹೇಮಲತಾ ಎಂಬುವರಿಗೆ ತಾನು ಡಾಕ್ಟರ್ ಎಂದು ಹೇಳಿ ಶಾದಿ ಡಾ.ಕಾಂ ನಲ್ಲಿ ಪರಿಚಯಿಸಿಕೊಂಡಿದ್ದ ಆಸಾಮಿ, ನಂತರ ಮದುವೆಯಾಗಿ ನಗದು ಚಿನ್ನಾಭರಣಗಳೊಂದಿಗೆ ಎಸ್ಕೇಪ್ ಆಗಿದ್ದನು. ಈ ಬಗ್ಗೆ ಕುವೆಂಪುನಗರ ಪೊಲೀಸರಿಗೆ ಹೇಮಲತಾ ದೂರು ನೀಡಿದ್ದರು.
ವಿಚಾರಣೆ ವೇಳೆ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು ಸುಮಾರು 15 ಮಹಿಳೆಯರಿಗೆ ದೋಖಾ ಮಾಡಿರುವುದಾಗಿ ಹೇಳಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಶಾಧಿ. ಡಾ.ಕಾಂ ಮೂಲಕ ಹೇಮಲತಾರನ್ನ ಕಾಂಟ್ಯಾಕ್ಟ್ ಮಾಡಿದ ಮಹೇಶ್, ಮೈಸೂರಿನ ವಿಜಯನಗರದಲ್ಲಿರುವ ಮನೆ ತೋರಿಸಿ ನಂಬಿಸಿದ್ದಾನೆ.ಈತನ ಬೋಗಸ್ ಮಾತುಗಳನ್ನ ನಂಬಿದ ಹೇಮಲತಾ ಜನವರಿ 1,2023 ರಲ್ಲಿ ವಿಶಾಖಪಟ್ನಂ ನಲ್ಲಿ ಮದುವೆಯಾಗಿದ್ದಾರೆ.ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದಾರೆ.
ತಾನು ಕ್ಲಿನಿಕ್ ಓಪನ್ ಮಾಡಬೇಕು ಎಂದು ಕಾರಣ ನೀಡಿ 70 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.ಹಣ ಕೊಡಲು ಹೇಮಲತಾ ಒಪ್ಪದೇ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದಾನೆ.ನಂತರ ಹೇಮಲತಾ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು 15 ಲಕ್ಷ ಕ್ಯಾಶ್ ಹಾಗೂ ಒಡವೆಗಳೊಂದಿಗೆ ಪರಾರಿಯಾಗಿದ್ದಾನೆ. ನಂತರ ಈತ ಮನೆಗೆ ಹಿಂದಿರುಗಿಲ್ಲ.
ಕೆಲವೇ ದಿನಗಳಲ್ಲಿ ಬೆಂಗಳೂರಿನ ದಿವ್ಯಾ ಎಂಬುವರು ಹೇಮಲತಾ ರವರನ್ನ ಸಂಪರ್ಕಿಸಿ ತನ್ನನ್ನೂ ಮದುವೆ ಆಗಿದ್ದಾರೆಂದು ಮಾಹಿತಿ ತಿಳಿಸಿದ್ದಾರೆ.
ಮಹೇಶ್ ವಂಚನೆಗೆ ಬೇಸತ್ತ ಹೇಮಲತಾ ನ್ಯಾಯಕ್ಕಾಗಿ ಕುವೆಂಪುನಗರ ಪೊಲೀಸರ ಮೊರೆ ಹೋಗಿದ್ದಾರೆ. ದೂರು ದಾಖಲಿಸಿಕೊಂಡ ಠಾಣೆ ಇನ್ಸ್ಪೆಕ್ಟರ್ ಅರುಣ್ ರವರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಹಾಗೂ ಕೆ.ಆರ್.ವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿ ವಿಶೇಷ ತಂಡ ರಚಿಸಿ “ಬುದ್ಧಿವಂತ” ಆರೋಪಿಯನ್ನ ಹೆಡಮುರಿ ಕಟ್ಟಿದ್ದಾರೆ.