‘ಜ್ಞಾನ ದೇಗುಲಕ್ಕೆ ಕೈ ಮುಗಿದು ಒಳಗೆ ಬರುತ್ತಿದ್ದಾರೆ’- ಕೊರೋನಾ ಓಡಿಸೋಣ.. ಮಕ್ಕಳನ್ನ ಓದಿಸೋಣ..

ಬೆಂಗಳೂರು: ಕೊವೀಡ್-19ನಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಇಂದಿನಿಂದ ಆರಂಭಗೊಳ್ಳುತ್ತಿವೆ. ಬರೋಬ್ಬರಿ 9 ತಿಂಗಳ ಗ್ಯಾಪ್ ನಂತರ ಮಕ್ಕಳು ಶಾಲೆಯ ಕಡೆ ಸಂಭ್ರಮದಿಂದ ಹೆಜ್ಜೆ ಹಾಕುತ್ತಿದ್ದಾರೆ.
ಶಾಲಾರಂಭ ಕುರಿತು ಸರಕಾರ ಪ್ರತಿನಿತ್ಯ ಸಬೂಬು ನೀಡುತ್ತಾ, ಮುಂದೂಡುತ್ತಾ ಬಂದಿತ್ತು. ಕೆಲ ಪೋಷಕರು ಆರಂಭಿಸಿ ಎಂದರೆ ಇನ್ನೂ ಕೆಲ ಪೋಷಕರು ಬೇಡ ಎನ್ನುತ್ತಿದ್ದರು. ಇದರಿಂದ ಸರಕಾರ ಗೊಂದಲಕ್ಕೆ ಸಿಲುಕಿತ್ತು. ಕೊನೆಯಲ್ಲಿ ಶಿಕ್ಷಣ ತಜ್ಞರು, ಆರೋಗ್ಯ ತಜ್ಞರ ಅಭಿಪ್ರಾಯ ಪಡೆದು ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಇಂದು ಶಾಲೆಗಳು ಆರಂಭಗೊಳ್ಳುತ್ತಿವೆ. SSLC ಹಾಗೂ ದ್ವಿತೀಯ PUC ತರಗತಿಗಳನ್ನು ಮಾತ್ರ ಆರಂಭಿಸಲಾಗುತ್ತಿದ್ದು 6, 7, 8 ಮತ್ತು 9ನೇ ತರಗತಿಗಳಿಗೆ ‘ವಿದ್ಯಾಗಮ’ದ ಮೂಲಕವೇ ಪಾಠ ಮಾಡಲು ಸಿದ್ಧತೆಗಳನ್ನು ನಡೆಸಲಾಗಿದೆ.
ಅಲಂಕೃತಗೊಂಡ ಶಾಲೆಗಳು: ಒಂಬತ್ತು ತಿಂಗಳುಕಾಲ ಶೈಕ್ಷಣಿಕ ಚಟುವಟಿಕೆಗಳಿಂದ ದೂರವಿದ್ದ ಮಕ್ಕಳಲ್ಲಿ ಭರವಸೆ ಮೂಢಿಸುವ ನಿಟ್ಟಿನಲ್ಲಿ ಹಲವು ಕಡೆ ಶಾಲೆಗಳನ್ನು ಬಣ್ಣ ಬಣ್ಣದ ಕಾಗದ, ರಂಗೋಲಿ, ಬಲೂನ್ ಗಳಿಂದ ಅಲಂಕೃತಗೊಳಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ಶಾಲಾರಂಭಕ್ಕೆ ಸರಕಾರ ನಿಗದಿ ಪಡಿಸಿರುವ ನಿಯಮಗಳನ್ನು ಜಾರಿ ಮಾಡುವುದು. ಮುಂಜಾಗೃತ ಕ್ರಮ, ಮಕ್ಕಳ ಕಡೆ ಗಮನ ಇತ್ಯಾದಿಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಸೂಚನೆಯನ್ನು ನೀಡಿದೆ.