ರಾಜ್ಯದಲ್ಲಿ ಸಧ್ಯಕ್ಕೆ ಶಾಲೆ-ಕಾಲೇಜು ಆರಂಭವಿಲ್ಲ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು: ರಾಜಧಾನಿಯಲ್ಲಿ ಕುಳಿತು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಕಾನ್ಸರೆನ್ಸ್ ಮೂಲಕ ಮಾತುಕತೆ ನಡೆಸಿದ ನಂತರ ಸಿಎಂ ಯಡಿಯೂರಪ್ಪ, ಸಧ್ಯಕ್ಕೆ ಶಾಲೆಗಳನ್ನ ಆರಂಭಿಸುವ ಬಗ್ಗೆ ವಿಚಾರವಿಲ್ಲ ಎನ್ನುವ ಮೂಲಕ ಮತ್ತೆ ಶಾಲೆಗಳ ಆರಂಭದ ಬಗ್ಗೆ ಗೊಂದಲ ಮೂಡಿದೆ.
ಕೇಂದ್ರ ಸರಕಾರ ಶಾಲೆ-ಕಾಲೇಜು ಆರಂಭಿಸುವುದಕ್ಕೆ ಅಕ್ಟೋಬರ್ 15ರಂದು ಸಮಯ ನಿಗದಿ ಮಾಡಿದ್ದರೂ ಕೂಡಾ, ಆಯಾ ರಾಜ್ಯವೂ ತೀರ್ಮಾನ ತೆಗೆದುಕೊಳ್ಳಬೇಕೆಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಹಲವರು ಹಲವು ರೀತಿಯಲ್ಲಿ ಹೇಳಿಕೆಗಳನ್ನ ನೀಡಿದ್ದರು. ಹಾಗಾಗಿಯೇ ಶಾಲೆ ಆರಂಭದ ಬಗ್ಗೆ ಗೊಂದಲವುಂಟಾಗಿತ್ತು.
ಇಂದು ಸಂಜೆ ಮಾತನಾಡಿರುವ ಸಿಎಂ ಯಡಿಯೂರಪ್ಪ, ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ಚರ್ಚೆ ಆಗಿಯೇ ಇಲ್ಲ. ಪಾಲಕರು ಒಪ್ಪಬೇಕು. ಹಾಗಾಗಿಯೇ ಸಧ್ಯಕ್ಕೆ ಶಾಲೆ ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
ಈಗಾಗಲೇ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಶಿಕ್ಷಕ ಸಮೂಹ ಕೂಡಾ ಆತಂಕದಲ್ಲೇ ದಿನಗಳನ್ನ ಕಳೆಯುತ್ತಿದೆ. ಈ ನಡುವೆ ವಿದ್ಯಾಗಮ ಯೋಜನೆಯು ನಿರಂತರವಾಗಿ ನಡೆಯುತ್ತಿದ್ದು, ಅಕ್ಟೋಬರ್ 15ರಿಂದ ಆನ್ ಲೈನ್ ತರಗತಿಗಳು ಆರಂಭವಾಗುವ ಸಾಧ್ಯತೆಯಿದೆ.