ವಾರದಲ್ಲೇ MLA ಋಣ ತೀರಿಸಲು ನಿಂತ ಇನ್ಸಪೆಕ್ಟರ್ ಸೂರೀನ್..?- ಜೋಡಳ್ಳಿ ಘಟನೆ 18 ಜನರ ಮೇಲೆ ದೊಂಬಿ ಕೇಸ್..

ಧಾರವಾಡ: ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ರಸ್ತೆ ಬಂದ್ ಮಾಡಿ ಹೋರಾಟ ನಡೆಸಿದ್ದರ ಸಂಬಂಧವಾಗಿ 18 ಜನರ ಮೇಲೆ ಸ್ವಮೋಟೋ ಕೇಸ್ ದಾಖಲು ಮಾಡಿಕೊಳ್ಳುವ ಮೂಲಕ ನೂತನವಾಗಿ ಅಧಿಕಾರ ಸ್ವೀಕರಿಸಿಕೊಂಡ ಇನ್ಸಪೆಕ್ಟರ್ ಪ್ರಭು ಸೂರೀನ್, ಶಾಸಕರ ಲೇಟರ್ ಋಣ ತೀರಿಸಲು ಮುಂದಾಗಿದ್ದಾರೆಂಬ ದೂರುಗಳು ಕೇಳಿ ಬಂದಿವೆ.
ಕಳೆದ ಎರಡು ದಿನದ ಹಿಂದೆ ಪ್ರೌಢಶಾಲೆಯ ಆಡಳಿತ ಮಂಡಳಿಗೆ ನೀಡಿದ್ದ ವೇತನಾನುದಾನವನ್ನ ಸರಕಾರ ಹಿಂದೆ ಪಡೆದ ಹಾಗೂ ಇಲ್ಲಿದ್ದ ಶಿಕ್ಷಕರನ್ನ ಬೇರೆ ಕಡೆ ವರ್ಗಾವಣೆ ಮಾಡಿದ್ದನ್ನ ಖಂಡಿಸಿ ಸ್ಥಳೀಯರು ಹೋರಾಟ ನಡೆಸಿದ್ದರು.
ಪ್ರತಿಭಟನೆಯ ಕಾವು ಹೆಚ್ಚಾಗಿದ್ದರಿಂದ ಸ್ವತಃ ಶಾಸಕ ಸಿ.ಎಂ.ನಿಂಬಣ್ಣನವರ ಸೇರಿದಂತೆ ಇನ್ಸಪೆಕ್ಟರ್ ಸೂರೀನ್ ಕೂಡಾ ಬಂದು ಹೋಗಿದ್ದರು. ಇದಾದ ಮೇಲೆ ಒಟ್ಟು 18 ಜನರ ಮೇಲೆ ಪ್ರಕರಣವನ್ನ ದಾಖಲು ಮಾಡಲಾಗಿದೆ.
ದೊಂಬಿ, ಜಗಳ ಮಾಡುವ ಉದ್ದೇಶ, ವಾಹನಗಳು ಹೋಗದಂತೆ ಅಡ್ಡಗಟ್ಟುವುದು ಸೇರಿದಂತೆ ಒಟ್ಟು 6 ಕಲಂಗಳಡಿ ಪ್ರಕರಣ ದಾಖಲು ಮಾಡಿದ್ದು, ದೂರನ್ನ ನೀಡಿದ್ದು ಕಲಘಟಗಿ ಠಾಣೆಯ ಪೊಲೀಸ್ ಚೆನ್ನಬಸಪ್ಪ ಅರಳಿಮರದ.
ಒಟ್ಟು 18 ಜನರ ಪೈಕಿ ಲಿಂಗಾಯತ ಸಮುದಾಯದ ಅಶೋಕ ಉಣಕಲ್ ಪ್ರಮುಖ ಆರೋಪಿಯಾಗಿದ್ದಾರೆ. ಅಕ್ರಮವಾಗಿ ಕೂಟವನ್ನ ಕಟ್ಟಿಕೊಂಡು ಚಳುವಳಿ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಆ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.