ಸರಕಾರಿ ಶಾಲೆ ಉದ್ಧಾರ ಮಾಡಿ ಅನ್ನೋ ಬದಲು “ಗುಡಿ-ಗುಂಡಾರ”ಕ್ಕಾಗಿ ಅನುದಾನ: ಸಚಿವ ಸಂತೋಷ ಲಾಡ ಬೇಸರ…
1 min readಗುಡಿ, ಗುಂಡಾರಗಳಿಗೆ ಅನುದಾನ ಬಳಸುವುದರ ಬದಲು ಸರ್ಕಾರಿ ಶಾಲೆಗಳಿಗೆ ಬಳಸಿದ್ದರೆ ಶಾಲೆಗಳು ಉದ್ದಾರವಾಗುತ್ತಿದ್ದವು: ಸಚಿವ ಸಂತೋಷ್ ಲಾಡ್
ಧಾರವಾಡ: “ ಸರ್ಕಾರಿ ಶಾಲೆಗಳನ್ನು ಜನರು ಉಳಿಸಿಕೊಳ್ಳಬೇಕು; ಗುಡಿಗಳನ್ನು ಕೇಳುವ ಬದಲಿಗೆ ಶಾಲೆಗಳನ್ನು ಕೇಳಬೇಕಿತ್ತು. ಹಾಗೇನಾದರೂ ಕೇಳಿದ್ದರೆ ಸರ್ಕಾರಿ ಶಾಲೆಗಳು ಈಗ ಹೇಗೆ ಇರುತ್ತಿದ್ದವು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ- ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ನಿರ್ಲಕ್ಷ್ಯದ ಬಗ್ಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ತೋರುವ ಅಸಡ್ಡೆಯನ್ನು ಸಚಿವರು ವಿವರಿಸಿದರು.
ನಮ್ಮೂರಿನ ಶಾಲೆಗಳಿಗೆ ಅನುದಾನ ಬೇಡ, ಗುಡಿ, ಗುಂಡಾರಗಳಿಗೆ ಕೊಡಿ ಎನ್ನುತ್ತಾರೆ. ಅದರಲ್ಲೂ ಲೋಕಸಭಾ ಸದಸ್ಯರ ಅನುದಾನ, ರಾಜ್ಯಸಭಾ ಸದಸ್ಯರ ಅನುದಾನ ಹಾಗೂ ಶಾಸಕರ ಅನುದಾನ ಎಲ್ಲವನ್ನೂ ಗುಡಿಗಳಿಗೆಯೇ ಕೇಳುತ್ತಾರೆ. ಗುಡಿಗೆ ಬೇಡ ಶಾಲೆಗೆ ಕೊಡಿ ಎಂದು ಕೇಳಿದ್ದರೆ ವ್ಯವಸ್ಥೆ ಹೀಗೆ ಇರುತ್ತಿತ್ತೇ..!? ಎಂದು ಪ್ರಶ್ನಿಸಿದರು.
ಸಾಮಾಜಿಕ ಕಾಳಜಿ ಅಗತ್ಯ
ಸರ್ಕಾರಿ ಶಾಲೆ, ಕಾಲೇಜು ಉಳಿಯಬೇಕಾದರೆ ಜನರ ಜವಾಬ್ದಾರಿಯೂ ಇದೆ. ಇಲ್ಲಿ ಸಾಮಾಜಿಕ ಕಾಳಜಿ ಅವಶ್ಯಕವಾಗಿ ಬೇಕಾಗುತ್ತದೆ ಎಂದರು.
ವರ್ಗಾವಣೆ ಮಾಡಿಸಿಕೊಡಿ..!?
ಅಧಿಕಾರಿಗಳನ್ನು ಕೂಡ ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಡಿ ಎಂದೆಲ್ಲ ಕೇಳುತ್ತಾರೆ. ಆದರೆ, ವರ್ಗಾವಣೆ ಆಗಿ ಹೋಗುವ ಬದಲಿಗೆ ಒಳ್ಳೆಯ ಕೆಲಸ ಮಾಡಿ; ಜನರಿಗೆ ಸ್ವಲ್ಪ ಒಳ್ಳೆಯದು ಮಾಡಬೇಕು ಎನ್ನುವುದು ಅಧಿಕಾರಿಗಳು, ನೌಕರರ ಮನಸ್ಸಿಗೆ ಬರಬೇಕು ಎಂದು ಸಚಿವರು ಹೇಳಿದರು.