ಸರಕಾರಿ ಶಾಲೆ ಶಿಕ್ಷಕನ ಕಮಾಲ್: ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಹೊಸ ದಾಖಲೆ
1 min readಮಂಗಳೂರು: ಸರಕಾರಿ ಶಾಲೆಯ ಶಿಕ್ಷಕರೋರ್ವರು ಇಂಡಿಯಾ ಬುಕ್ ಆಫ್ ರೆಕಾರ್ಡ ದಾಖಲೆಗಾಗಿ ಪದ್ಮಾಸನ ಹಾಕಿ, ಕಾಲಿಗೆ ಸರಪಳಿ ಜಿಗಿದು ಸಮುದ್ರದಲ್ಲಿ ಒಂದು ಕಿಲೋ ಮೀಟರ್ ದೂರದವರೆಗೆ ಈಜಿ ಸಾಹಸ ಮೆರೆದಿದ್ದಾರೆ.
ಬಂಟ್ವಾಳದ ಕಲ್ಮಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜ ಖಾರ್ವಿ, ತಣ್ಣೀರುಬಾಯಿಯ ಅರಬ್ಬಿ ಸಮುದ್ರದಲ್ಲಿ 25 ನಿಮಿಷ 16 ಸೆಕೆಂಡಿನಲ್ಲಿ ದಾಖಲೆ ಬರೆದಿದ್ದಾರೆ. ಬೆಳಿಗ್ಗೆ 8.55ಕ್ಕೆ ತಣ್ಣೀರುಬಾವಿಯ ದಡದಿಂದ ಈಜು ಆರಂಭಿಸಿದ ಅವರು 9.20ಕ್ಕೆ ಮರಳಿ ದಡ ಸೇರಿದ್ದಾರೆ.
ಈಜಿನ ಮೂಲಕ ಈಗಾಗಲೇ ಸಾಕಷ್ಟು ಸಾಹಸ ಮೆರೆದಿರುವ ಶಿಕ್ಷಕ ನಾಗರಾಜ ಖಾರ್ವಿ ಕಂಚುಗೋಡು ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಸಮುದ್ರದ ನೀರಿನಲ್ಲಿ 1ಕಿ.ಮೀ ದೂರವನ್ನ ಕ್ರಮಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಕ್ರೀಡಾ ಇಲಾಖೆಯ ಅಧಿಕಾರಿ ಪ್ರದೀಪ ಡಿಸೋಜಾ ಉಪಸ್ಥಿತರಿದ್ದು ಖಾರ್ವಿಯವರ ದಾಖಲೆಗೆ ಸಾಕ್ಷಿಯಾದರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿಯಾಗಿರುವ ನಾಗರಾಜ, ಕಳೆದ ಜನೇವರಿಯಲ್ಲಿ ಗುಜರಾತನ ವಡೋದರದಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ, ಒಂದು ಕಂಚಿನ ಪದಕ ಪಡೆದಿದ್ದಾರೆ. ಈ ಮೂಲಕ ಸರಕಾರಿ ಶಾಲೆಯ ಪ್ರಾಮುಖ್ಯತೆಯನ್ನ ಹೆಚ್ಚಿಸಿದ್ದಾರೆ.