ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕ ಕೋವಿಡ್ ಗೆ ಬಲಿ…!

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆಯ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದ ಶಿಕ್ಷಕರೋಬ್ಬರು ಕೋವಿಡ್-19 ತಗುಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ.

ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕಟ್ಟೆಪ್ಪ ಎಂಬುವವರೇ ಸಾವಿಗೀಡಾದ ಶಿಕ್ಷಕರಾಗಿದ್ದಾರೆ. ಚುನಾವಣೆ ವೇಳೆಯಲ್ಲಿ ಕಾರ್ಯನಿರ್ವಹಿಸಿ ಬಂದ ನಂತರ ಕೊರೋನಾ ಸೋಂಕು ತಗುಲಿತ್ತು.
ಕೊರೋನಾಗೆ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕ ಕಟ್ಟೇಪ್ಪ ಅವರು ಇಂದು ಬೆಳಿಗಿನ ಜಾವ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಉಪಚುನಾವಣೆಯ ವೇಳೆಯಲ್ಲಿ ಅನಾರೋಗ್ಯಗೊಂಡಾಗ ತಪಾಸಣೆ ಮಾಡಿಸಲಾಗಿತ್ತು. ಆ ಸಮಯದಲ್ಲಿ ಕೊವಿಡ್ ದೃಢಪಟ್ಟಿತ್ತು.
ಶಿಕ್ಷಕ ಕಟ್ಟೆಪ್ಪ ಅವರ ಸಾವಿನಿಂದ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇನ್ನುಳಿದ ಸಿಬ್ಬಂದಿಗಳಿಗೂ ಆತಂಕ ಮನೆ ಮಾಡಿದ್ದು, ದೇವದುರ್ಗ ತಾಲೂಕಿನ ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಶಿಕ್ಷಕ ಕಟ್ಟೆಪ್ಪ ಅವರ ಕುಟುಂಬಕ್ಕೆ ಈ ನೋವನ್ನ ಭರಿಸಿಕೊಳ್ಳುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಪ್ರಾರ್ಥಿಸಿರುವ ಶಿಕ್ಷಕ ವಲಯ, ಶಿಕ್ಷಕರ ಆತ್ಮಕ್ಕೆ ಶಾಂತಿಯನ್ನ ಕೋರಿದ್ದಾರೆ.