Posts Slider

Karnataka Voice

Latest Kannada News

ಇನೈದು ದಿನದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಆರಂಭ: ಹೊಸ ಹುರುಪು- ಹೊಸ ಶೈಲಿ

Spread the love

ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳ ಹಿಂದೆ ಮುಚ್ಚಲ್ಪಟ್ಟಿರುವ ಶಾಲೆಗಳು ಇನ್ನೂ ತೆರೆದಿಲ್ಲ. ಆದರೆ ಮಕ್ಕಳಿಗೆ ಶಿಕ್ಷಣ ಕೊಡಬೇಕಾದ ಮಹತ್ವದ ಜವಾಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ. ಹೀಗಾಗಿ ಶಾಲೆ ಆರಂಭಿಸುವ ಬಗ್ಗೆ ಮಹತ್ವದ ಚರ್ಚೆಯನ್ನು ಶಿಕ್ಷಣ ಇಲಾಖೆ ಆರಂಭಿಸಿದೆ. ಜೊತೆಗೆ ಸಂಬಂಧಿಸಿದ ಹಲವು ಇಲಾಖೆಗಳ ಅಭಿಪ್ರಾಯವನ್ನೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೇಳಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ನೀಡಿರುವ ಆದೇಶದಲ್ಲಿ ಶಾಲೆಗಳನ್ನು ಆರಂಭಿಸಲು ಆದೇಶ ನೀಡಿದೆ. ಆದರೆ ಅಂತಿಮವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಕೊಟ್ಟಿದೆ. ಅನ್‌ಲಾಕ್‌ ಮಾರ್ಗಸೂಚಿ ಅನ್ವಯ ಈಗಾಗಲೇ ಸನಿಮಾ ಗೃಹಗಳು ಸೇರಿದಂತೆ ಎಲ್ಲವನ್ನೂ ಆರಂಭಿಸಲು ಶರತ್ತುಬದ್ಧ ಅನುಮತಿ ಕೊಡಲಾಗಿದೆ. ಹೀಗಾಗಿ ಶಾಲೆಗಳನ್ನೂ ಆರಂಭಿಸಲು ಕೇಂದ್ರ ಅವಕಾಶ ಮಾಡಿಕೊಟ್ಟಿದೆ.

ಆದರೆ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ಹರಡುವುದು ಕಳೆದ ಒಂದು ವಾರದಿಂದ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ತಕ್ಷಣ ಶಾಲೆ ಆರಂಭಿಸಲು ಜನರ ವಿರೋಧವಿದೆ. ಆದರೆ ಮಕ್ಕಳು ಸಹಪಾಠಿಗಳೊಂದಿಗೆ ಓದಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಂವೇದ ಇ-ಕ್ಲಾಸ್ ಪಾಠ ಸರಣಿಯ ಎರಡನೆ ಅವಧಿ ಅ. 12ರಿಂದ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಅವಧಿಯಲ್ಲಿ 5,6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವೀಡಿಯೋ ಪಾಠಗಳು DSERT Jnanadeepa ಮತ್ತು Makkalavani ಯುಟ್ಯೂಬ್ ಚಾನೆಲ್‍ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇಷ್ಟರಲ್ಲಿಯೇ ಈ ತರಗತಿಗಳು ದೂರದರ್ಶನದ ಚಂದನ ವಾಹಿನಿಯಲ್ಲಿಯೂ ಮರುಪ್ರಸಾರಗೊಳ್ಳಲಿವೆ ಎಂದಿದ್ದಾರೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳನ್ನು ಆರಂಭಿಸಬೇಕಾಗಿದೆಯಾದರೂ ಕೋವಿಡ್-19ರ ಪ್ರಸರಣದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೂರದರ್ಶನ ಚಂದನವಾಹಿನಿಯಿಂದ ಪ್ರತಿ ದಿನ 4 ಘಂಟೆ ಅವಧಿಯಲ್ಲಿ ಪ್ರಥಮ ಹಂತದಲ್ಲಿ ಪ್ರೌಢಶಾಲೆಯ 8 ರಿಂದ 10ನೆಯ ತರಗತಿಯ ಮಕ್ಕಳಿಗೆ ವಿಡಿಯೋ ಪಾಠ ತಯಾರಿಸಿ ಪ್ರಸಾರ ಮಾಡಲಾಗುತ್ತಿದ್ದು, ಸಮಯ ಲಭ್ಯತೆ ಆಧಾರದಲ್ಲಿ ಉಳಿದ ತರಗತಿಗಳ ಪಾಠ ಪ್ರಸಾರವು ಆಗಲಿದೆ ಎಂದು ಅವರು ಹೇಳಿದ್ದಾರೆ.

ಇಲಾಖೆಯ ಎಲ್ಲಾ ಹಂತದ ಶಿಕ್ಷಕರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಯೂಟ್ಯೂಬ್‍ಗಳಲ್ಲಿ ಮಕ್ಕಳು ಪಾಠವೀಕ್ಷಿಸುವಂತೆ ಗಮನ ಹರಿಸಿ ಮೇಲ್ವಿಚಾರಣೆ ಮಾಡಲು ಸೂಚಿಸಿದೆ. ಪೋಷಕರು ಮಕ್ಕಳು ಪಾಠ ವೀಕ್ಷಿಸಲು ಪ್ರೋತ್ಸಾಹಿಸಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸುರೇಶ್ ಕುಮಾರ್ ಕೋರಿದ್ದಾರೆ. ಶಾಲಾ ತರಗತಿಗಳನ್ನು ಆರಂಭಿಸುವ ಬಗ್ಗೆ ಅಭಿಪ್ರಾಯ ಸೂಚಿಸುವಂತೆ ಶಿಕ್ಷಣ ಇಲಾಖೆ ರಾಜ್ಯ ಆರೋಗ್ಯ ಇಲಾಖೆಯನ್ನು ಕೇಳಿಕೊಂಡಿತ್ತು. ಈ ಬಗ್ಗೆ ನಿನ್ನೆ ತಜ್ಞರು, ಮಕ್ಕಳ ತಜ್ಞರು ಹಾಗೂ ವೈದ್ಯರೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಸಭೆ ನಡೆಸಿದ್ದರು. ಆದರೆ ಶಾಲೆ ಆರಂಭಿಸಲು ಸಲಹೆ ಕೊಡುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಎಲ್ಲರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಬಳಿಕ ಶಿಕ್ಷಣ ಇಲಾಖೆಗೆ ಸಲಹೆ ಕೊಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದರು.


Spread the love

Leave a Reply

Your email address will not be published. Required fields are marked *