“ವಿದ್ಯಾಗಮ”ದಿಂದ ಸರಕಾರಿ ಶಾಲೆಗಳಲ್ಲಿ ಕಾನೂನು ಉಲ್ಲಂಘನೆ: ಡಿಡಿಪಿಐ-ಬಿಇಓ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ವಿದ್ಯಾಗಮ ಆಯೋಜನೆ ಹೆಸರಿನಲ್ಲಿ ಶಾಲಾ ತರಗತಿ ಮತ್ತು ಪಾಠ ನಡೆಸುತ್ತ ರಾಷ್ಟ್ರೀಯ ವಿಪತ್ತು ಕಾಯಿದೆಯ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಅಸೋಸಿಯೇಟೆಡ್ ಮ್ಯಾನೇಜಮೆಂಟ್ಸ್ ಆಫ್ ಪ್ರೈಮರಿ & ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರೆ ಬರೆದಿದೆ.
ರಾಷ್ಟೀಯ ವಿಪತ್ತು ಕಾಯಿದೆಯ ಮಾರ್ಗಸೂಚಿಯಂತೆ ಯಾವುದೇ ಶಾಲೆ-ಕಾಲೇಜುಗಳು ಆರಂಭವಾಗಬಾರದೆಂದು ನಿಯಮವಿದೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾಗಮ ಆಯೋಜನೆಯ ಅಡಿಯಲ್ಲಿ ಪಾಠಗಳನ್ನ ಆರಂಭಿಸಿದ್ದಾರೆ. ಈ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂದು ದೂರಲಾಗಿದೆ.
ಸರಕಾರಿ ಶಾಲೆ ಶಿಕ್ಷಕರು ಮನೆ ಮನೆಗೆ ತೆರಳಿ ಖಾಸಗಿ ಶಾಲೆಗಳು ಈ ವರ್ಷ ಪ್ರಾರಂಭವಾಗುವುದಿಲ್ಲ. ನಮ್ಮಲ್ಲಿ ಮಾತ್ರ ಶಿಕ್ಷಣ ನೀಡುತ್ತೇವೆ, ಜೊತೆಗೆ ಆಹಾರ, ಪುಸ್ತಕ ನೀಡುತ್ತೇವೆಂದು ಆಮಿಷವೊಡ್ಡುತ್ತಿದ್ದಾರೆ. ವಾಮಮಾರ್ಗದಿಂದ ಮಕ್ಕಳನ್ನ ಸೆಳೆಯುತ್ತದ್ದಾರೆಂದು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಮತ್ತು ಬಿಇಓ ಮೇಲೆ ರಾಷ್ಟ್ರೀಯ ವಿಪತ್ತು ಕಾಯಿದೆ ಉಲ್ಲಂಘನೆಯಡಿಯಲ್ಲಿ ಕಾನೂನಾತ್ಮಕ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕೆಂದು ಕ್ಯಾಮ್ಸ್ ಆಗ್ರಹಿಸಿದೆ.
ಈ ಬಗ್ಗೆ ವಿವರವಾದ ಪತ್ರವನ್ನ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರರಿಗೆ ಬರೆದು ಒತ್ತಾಯಿಸಿದ್ದಾರೆ.