ಮುಡಾದಲ್ಲಿ ಬಿಜೆಪಿಯವರಿದ್ದಾಗಲೇ “ಸೈಟು ನೀಡಿದ್ದು”- ಸಚಿವ ಸಂತೋಷ ಲಾಡ್ ಅಚ್ಚರಿಯ ಹೇಳಿಕೆ…

ಪ್ರಧಾನಿ ವಿರುದ್ಧ ರಾಷ್ಟ್ರಪತಿಗಳು ಪ್ರಾಸಿಕ್ಯೂಷನ್ ಕೊಟ್ಟರೆ ಮೋದಿ ರಾಜೀನಾಮೆ ಕೊಡ್ತಾರಾ?: ಲಾಡ್ ಪ್ರಶ್ನೆ
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜಕೀಯ ಪ್ರೇರಿತವಾಗಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಕೊಡಿಸಲಾಗಿದೆ. ಅದೇ ರಾಷ್ಟ್ರಪತಿಗಳು ಪ್ರಧಾನಿ ವಿರುದ್ಧ ಪ್ರಾಸಿಕ್ಯೂಷನ್ ಕೊಟ್ಟರೆ ಮೋದಿ ಅವರು ರಾಜೀನಾಮೆ ಕೊಡುತ್ತಾರಾ? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ.
ಇಲ್ಲಿದೆ ವೀಡಿಯೋ…
ಧಾರವಾಡದಲ್ಲಿ ನಡೆದ ಪ್ರತಿಭಟನೆ ವೇಳೆಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ರಾಜಕೀಯವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ರೀತಿಯ ಕಾನೂನು ತನಿಖೆ ಅವಶ್ಯಕತೆ ಇರಲಿಲ್ಲ. ಆದರೂ ಅವರು ರಾಜಕೀಯ ಪ್ರೇರಿತವಾಗಿ ಮುಡಾ ಕುರಿತು ಪ್ರಾಸಿಕ್ಯೂಷನ್‌ಗೆ ಕೊಟ್ಟಿದ್ದಾರೆ ಎಂದರು.
ಮುಡಾ ಸೈಟ್ ವಿಚಾರದಲ್ಲಿ ಯಾವುದೇ ವ್ಯಾಜ್ಯ ಇಲ್ಲ. ಬಿಜೆಪಿ ಅವಧಿಯಲ್ಲೇ ಕೊಟ್ಟಂತಹ ಸೈಟ್‌ಗಳು ಅವು. 125 ಸೈಟ್‌ಗಳನ್ನು ಬಿಜೆಪಿ ಅವಧಿಯಲ್ಲಿ ಕೊಟ್ಟಿದ್ದಾರೆ. ಅವರೇ ಸೈಟ್ ಕೊಟ್ಟು ಈಗ ಅಕ್ರಮ ಎನ್ನುತ್ತಿದ್ದಾರೆ. ನಮ್ಮ ಸಮಯದಲ್ಲೇ ಅಕ್ರಮ ಆಗಿದೆ ಎಂದು ಬಿಜೆಪಿಯವರು ಹೇಳಲಿ. ಬೊಮ್ಮಾಯಿ ಅವರು ಸಿಎಂ ಇದ್ದಾಗ ಈ ಕೆಲಸ ಆಗಿದ್ದು, ಅವರು ನಮ್ಮ ಅವಧಿಯಲ್ಲೇ ಸೈಟ್ ಹಂಚಿಕೆ ಆಗಿದೆ ಎಂದು ಹೇಳಲಿ ನೋಡೋಣ. ಸಿದ್ದರಾಮಯ್ಯ ಈ ಅಕ್ರಮದಲ್ಲಿ ಭಾಗಿಯಾದ ಬಗ್ಗೆ ಒಂದಾದರೂ ದಾಖಲೆ ಇದೆಯಾ? ಸಿಎಂ ಅವರ ರಾಜೀನಾಮೆ ಕೇಳಲು ಯಾವುದೇ ಬುನಾದಿ ಇಲ್ಲ ಎಂದರು.
ಬಿಜೆಪಿಯವರು ಎಲ್ಲ ಕಡೆ ತಮ್ಮದೇ ಸರ್ಕಾರ ಇರಲಿ ಎನ್ನುತ್ತಿದ್ದಾರೆ. ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ಮೀಸಲಾತಿ ತಂದಿಲ್ಲ. ಹಿಂದುತ್ವದ ಐಡಿಯಾಲಜಿ ಮೂಲಕ ಸಂವಿಧಾನ ತರಲು ಅವರು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಸಚಿವ ಲಾಡ್ ವಾಗ್ದಾಳಿ ನಡೆಸಿದರು.