ಸಂತೋಷದಲ್ಲಿ ಹೊಳೆಯಲ್ಲಿ ಹುಣಸಿಹಣ್ಣು ತೊಳೆದರು..!

ಹುಬ್ಬಳ್ಳಿ: ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಹಲವಾರು ವೇದಿಕೆಗಳ ಮೇಲೆ ಭಾಷಣ ಬಿಗಿಯುವ ಸ್ಥಳೀಯ ಬಿಜೆಪಿ ನಾಯಕರುಗಳ ಅನುಯಾಯಿಗಳು ಪೋಲಿಸ್ ಅಧಿಕಾರಿವೊಬ್ಬರಿಗೆ ಎರಡು ವರ್ಷಗಳ ಕಾಲ ವರ್ಗಾವಣೆ ಆಗದಂತೆ ನೋಡಿಕೊಳ್ಳುವುದಾಗಿ ಮಾತು ಕೊಟ್ಟು ಹಣ ಗುಳುಂ ಮಾಡಿದ ಪ್ರಕರಣ ಈಗ ನಗರದ ಬಿಜೆಪಿ ವಲಯದಲ್ಲಿ ಮತ್ತೊಮ್ಮೆ ಭಾರಿ ಸದ್ದು ಮಾಡಿದೆ.
ಮೊನ್ನೆ ತಡರಾತ್ರಿ ಹೊರಬಿದ್ದ ಹಲವಾರು ಇನ್ಸಪೆಕ್ಟರಗಳ ವರ್ಗಾವಣೆ ಆದೇಶ ನೋಡಿದ ತಕ್ಷಣ ಬೆರಗಾದ ಹುಬ್ಬಳ್ಳಿ ಉಪನಗರದ ಪೋಲಿಸ್ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರುಗಳು, ತಮ್ಮ ನಾಯಕರುಗಳು ಅಧಿಕಾರಿಗಳಿಂದ ಹಣ ಪಡೆದು ವರ್ಗಾವಣೆ ಧಂದೆಯಲ್ಲಿ ಪಾಲ್ಗೊಂಡಿದ್ದ ಮರಿ ನಾಯಕರುಗಳನ್ನು ರಕ್ಷಿಸಿದ್ದಾರೆ. ಅಲ್ಲದೆ, ಅವರೂ ಇಂತಹ ಕೃತ್ಯಗಳಲ್ಲಿ ಪರೋಕ್ಷವಾಗಿ ಬೆಂಬಲಕ್ಕಿದ್ದಾರೆ ಎಂದು ಸಾಭೀತುಪಡಿಸಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಎರಡು ವರ್ಷಗಳ ಕಾಲ ಸೇಫ್ ಎಂದು ಭಾವಿಸಿ ಹಣ ಹೂಡಿದ್ದ ಇನ್ಸಪೆಕ್ಟರ್ ಮಾತ್ರ ‘ಹೊಳೆಯಲ್ಲಿ ಹುಣಸಿ ಹಣ್ಣು ತೊಳೆದಂಗಾತು’ ಎಂದು ಹೇಳಿಕೊಂಡು ಓಡಾಡುವಂತಾಗಿದೆ. ಮರಿ ನಾಯಕರುಗಳು ಜಿಲ್ಲೆಯ ಶಾಶ್ವತ ನಾಯಕರುಗಳ ಗಮನಕ್ಕೆ ಇಲ್ಲದ ಹಾಗೆ ತಮ್ಮಂತಹ ಇನ್ಸಪೆಕ್ಟರಗಳನ್ನ ಲಪಟಾಯಿಸಿ ಹಣ ಮಾಡುತ್ತಿದ್ದಾರೆ ಎಂದು ಭಾವಿಸಿ ನ್ಯಾಯ ಕೇಳಿ ಧೀಮಂತ ನಾಯಕರುಗಳ ಮನೆಬಾಗಿಲಿಗೆ ತೆರಳಿದ್ದ ಇನ್ಸಪೆಕ್ಟರ್ ಮಾತ್ರ ಹಣ ‘ಹೊಳೆ’ಯಲ್ಲಿ ಹಾಕಿದಂತಾಯಿತು ಎಂದು ಭಾವಿಸಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಒಂದೇಡೆ ಹಣ ಹೋತು, ಆಯಕಟ್ಟಿನ ಸ್ಥಳನೂ ಹೋಯಿತು ಎಂದು ಅಧಿಕಾರಿ ನೋವಿನಿಂದ “ಸಾಹೇಬ್ರು , ತಾನು ಕೊಟ್ಟಿದ್ದ ಪತ್ರ ವಾಪಸ್ಸು ಪಡೆದಿರುವುದಾಗಿ ಹೇಳಿದ್ರು, ಹಾಗೂ ತನ್ನ ಮರಿ ನಾಯಕರುಗಳಿಗೆ ಇನ್ಮುಂದೆ ಇಂತಹ ಕೆಲಸ ಮಾಡಿದ್ರೆ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದ್ದರು” ಎಂದು ಹೇಳುತಿದ್ದಾರೆ ಎಂದು ಪೋಲಿಸ್ ಸಿಬ್ಬಂದಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಇತ್ತ ಸಂತೋಷ ದಿಂದ ಬೀಗುತ್ತಿರುವ ಮರಿನಾಯಕರುಗಳು ನಾವೇ ಅ-ಮರೇಂದ್ರ ಬಾಹುಬಲಿಗಳು ಎಂದು ಹೇಳುತ್ತ 108 ಟೆಂಗಿನಕಾಯಿಗಳು ಒಡೆದರೂ ನಮ್ಮನ್ನು ಯಾರೂ ಏನೂ ಮಾಡಿಕೊಳ್ಳಲಾಗುವುದಿಲ್ಲ ಎನ್ನುತ್ತ ಓಡಾಡುತ್ತಿದ್ದಾರೆ ಎನ್ನುವ ಮಾತಿದೆ.