ಮರಳು ಲಾರಿಗಳ ಮೇಲೆ ಡಿಸಿಪಿ ರಾಮರಾಜನ್ ದಾಳಿ: 9 ಲಾರಿಗಳು ವಶ

ಹುಬ್ಬಳ್ಳಿ: ಅಕ್ರಮ ಮರಳು ದಂಧೆಯನ್ನ ಹೆಡಮುರಿಗೆ ಕಟ್ಟಲು ಸಜ್ಜಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ, ಅಕ್ರಮ ಮರಳು ದಂಧೆಯ ಜಾಡನ್ನ ಬೇಧಿಸಿದ್ದು 9 ಲಾರಿಗಳನ್ನ ಹಿಡಿದು ಕ್ರಮ ಜರುಗಿಸುವಂತೆ ಸೂಚಿಸಿದ ಘಟನೆ ನಡೆದಿದೆ.
ಬೆಳ್ಳಂಬೆಳಿಗ್ಗೆ ದಾಳಿ ಮಾಡಿರುವ ಡಿಸಿಪಿ ರಾಮರಾಜನ್ ಅವರು, ಅನಧಿಕೃತವಾದ ಪತ್ರದೊಂದಿಗೆ ಮರಳು ಸಾಗಾಟ ಮಾಡುತ್ತಿದ್ದ ಒಂಬತ್ತು ಲಾರಿಗಳನ್ನ ವಶಕ್ಕೆ ಪಡೆದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಪಾಸಣೆ ಮಾಡಿ ಕ್ರಮ ಜರುಗಿಸುವಂತೆ ಆದೇಶ ನೀಡಿದ್ದಾರೆ.
ಬಹುತೇಕ ಲಾರಿಗಳಲ್ಲಿರುವ ಮರಳು ಸಾಗಾಣಿಕೆ ಪಾಸ್ ಗಳಲ್ಲಿ ವಾಹನಗಳ ಸಂಖ್ಯೆ ಬೇರೆಯದ್ದೇ ಆಗಿದೆ ಎಂದು ಹೇಳಲಾಗಿದೆ. ಡಿಸಿಪಿಯವರು ನಡೆಸಿದ ದಾಳಿಯ ಸಮಯದಲ್ಲಿ ಹಲವು ಲೋಪದೋಷಗಳು ಕಂಡು ಬಂದಿದ್ದು, ಅದೇಲ್ಲವನ್ನೂ ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳಲು ಆದೇಶ ನೀಡಲಾಗಿದೆ.
ವಶಕ್ಕೆ ಪಡೆದಿರುವ ಮರಳು ತುಂಬಿದ ಲಾರಿಗಳ ಮೇಲೆ ತಾಡಪತ್ರಿಯನ್ನೂ ಹಾಕದೇ ಕಾನೂನು ಉಲ್ಲಂಘನೆ ಮಾಡಲಾಗಿದೆ. ಅಷ್ಟೇ ಅಲ್ಲ, ಲಾರಿಯ ಹಿಂಭಾಗದ ನಂಬರ ಕಾಣಿಸದಂತೆ ಅಳಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಖಡಕ್ ಅಧಿಕಾರಿಯಾಗಿರುವ ರಾಮರಾಜನ್ ದಾಳಿ, ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದು ಮುಂದೆನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.