ಮರಳು ದಂಧೆಯಲ್ಲಿದ್ದ ಶಿಕ್ಷಕನಿಗೆ ಇನ್ನೂ ಶಿಕ್ಷೆಯಿಲ್ಲ: ದಂಧೆಯಲ್ಲಿ ‘ಬಿಇಓ’ ಶಾಮೀಲು….!?
1 min readಗದಗ: ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಶಾಲೆಗೆ ರಜೆ ಹಾಕಿ ಮರಳು ದಂಧೆಯಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮವನ್ನ ಜರುಗಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್ ಕೆ ಪಾಟೀಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಶಿಕ್ಷಕನ ವಿರುದ್ಧ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ನಂತರ ಶಾಲೆಯಿಂದ ಹೋಗುತ್ತಿದ್ದಾರಂತೆ. ಸರ್ಕಾರಿ ಸಂಬಳ ಪಡೆದರೂ ಮಕ್ಕಳಿಗೆ ಪಾಠ ಮಾಡುತ್ತಿರಲಿಲ್ಲ. ಪಾಠ ಮಾಡುವ ಬದಲು ಶಾಲೆಗೆ ರಜೆ ಹಾಕಿ ಮರಳು ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಎಸ್ ಕೆ ಪಾಟೀಲ್ ಶಿರಹಟ್ಟಿ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದಾರೆ. ಆದರೆ 3 ತಿಂಗಳಿಂದ ಶಾಲೆ ಕಡೆ ತಿರುಗಿ ನೋಡಿಲ್ಲ. ನವೆಂಬರ್, ಡಿಸೆಂಬರ್ನಲ್ಲಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಲ್ಲ. ಬಳಿಕ 2 ತಿಂಗಳು ಹಾಜರಾದಂತೆ ಸಹಿ ಹಾಕಿದ್ದಾರೆ. ಒಂದೇ ದಿನ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದಾರೆ. 2 ತಿಂಗಳಿಗೆ ಒಟ್ಟಿಗೆ ಸಹಿ ಮಾಡಿ ಮತ್ತೆ ಶಾಲೆಗೆ ರಜೆ ಹಾಕಿದ್ದಾರಂತೆ. ಎಸ್ ಕೆ ಪಾಟೀಲ್ ಗಣಿತ ಪಾಠ ಮಾಡುವ ಶಿಕ್ಷಕನಾಗಿದ್ದು, ಶಾಲೆಗೆ ಗೈರಾದ ಹಿನ್ನೆಲೆ ಗಣಿತ ಪಾಠ ಹಿಂದುಳಿದಿದೆ.
ಈ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಬಿಇಓ ಆರ್ ಎಸ್ ಬುರಡಿ, ಶಿಕ್ಷಕನ ಕಳ್ಳಾಟಕ್ಕೆ ನಾನು ಸಾಥ್ ನೀಡಿಲ್ಲ. ನನಗೆ ಈ ಬಗ್ಗೆ ಯಾರೂ ದೂರು ನೀಡಿಲ್ಲ. ಮುಖ್ಯ ಶಿಕ್ಷಕ, ಸಿಆರ್ಸಿಗಳು ನನಗೆ ಯಾರೂ ಮಾಹಿತಿ ನೀಡಿಲ್ಲ. ತಕ್ಷಣ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡುತ್ತೇನೆ ಎಂದು ಹೇಳಿದ್ದರು.
ಸೋಜಿಗವೆಂದರೇ ಇಲ್ಲಿಯವರೆಗೆ ಶಿಕ್ಷಕ ಪಾಟೀಲನ ವಿರುದ್ಧ ಯಾವುದೇ ಕ್ರಮವನ್ನ ಜರುಗಿಸದೇ ಬಿಇಓ ಕೂಡಾ ಕಳ್ಳಾಟ ನಡೆಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈಗಲಾದರೂ, ಅಧಿಕಾರಿಗಳು ಎಚ್ಚೆತ್ತು ಇಂತಹ ದುಷ್ಟಕೂಟಕ್ಕೆ ತಕ್ಕ ಪಾಠ ಕಲಿಸಬೇಕಿದೆ.