ಬೀಗರೂಟ ತಿಂದವನ ಸಾವು: ಕುಟುಂಬದವರಿಂದ ದೂರು

ಹುಬ್ಬಳ್ಳಿ: ಬೀಗರ ಮನೆಗೆ ಹೋಗಿ ಊಟ ಮಾಡಿದ್ದ ವ್ಯಕ್ತಿಯೋರ್ವ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಿಮ್ಸನಲ್ಲಿ ನಡೆದಿದ್ದು, ಮೃತ ವ್ಯಕ್ತಿಯ ಕುಟುಂಬದವರು ಬೀಗರ ಮೇಲೆ ದೂರು ದಾಖಲು ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ನಾಗನೂರ ಗ್ರಾಮದ ಲಕ್ಷ್ಮಣ ಎಂಬಾತನೇ ಆರೋಗ್ಯದಲ್ಲಿ ತೊಂದರೆಯಾಗಿ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮಣನ ಸಹೋದರರು, ಬೀಗರ ಮೇಲೆ ದೂರು ನೀಡಿದ್ದರಿಂದ, ಮೃತನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
46 ವಯಸ್ಸಿನ ಲಕ್ಷ್ಮಣ ತನ್ನೂರಿನ ಬೀಗರ ಮನೆಗೆ ಊಟಕ್ಕೆ ಹೋಗಿದ್ದ. ಊಟ ಮಾಡಿದ ಕೆಲವೇ ಸಮಯದಲ್ಲಿ ತೀವ್ರ ಹೊಟ್ಟೆನೋವಿನಿಂದ ನರಳುತ್ತಿದ್ದ. ತಕ್ಷಣವೇ ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹುಬ್ಬಳ್ಳಿಯ ಕಿಮ್ಸಗೆ ಕರೆತಲಾಗಿತ್ತು. ಆದರೆ, ಲಕ್ಷ್ಮಣ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ಲಕ್ಷ್ಮಣ ಸಾವಿಗೆ ಬೀಗರ ಕಾರಣವೆಂದು ದೂರು ನೀಡಿದ್ದರಿಂದ ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರು, ಗುತ್ತಲ ಠಾಣೆ ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದಾರೆ.