Posts Slider

Karnataka Voice

Latest Kannada News

ಪಡಿತರ ವ್ಯವಸ್ಥೆಯ ಮೇಲೊಂದು ಚಿತ್ರ…. ಹಳ್ಳಿ ಹುಡುಗಿಯ ಗೆಟಪ್ ನಲ್ಲಿ ರಾಗಿಣಿ ಮಿಂಚು…

Spread the love

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಎಂಬ ಹೆಸರಿನಲ್ಲಿ ಹೊಸ ಚಿತ್ರವೊಂದು ಸೆಟ್ಟೇರಿದ್ದು ಅನೇಕರಿಗೆ ಗೊತ್ತಿರಬಹುದು. ಈಗಾಗಲೇ ಸದ್ದಿಲ್ಲದೆ ಈ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಅಂತಿಮ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಇದೇ ವೇಳೆ ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿ, ಚಿತ್ರೀಕರಣದ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿತು.

ಇನ್ನು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಹೆಸರೇ ಹೇಳುವಂತೆ, ಇದು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮತ್ತು ಸಾರ್ವಜನಿಕ ಪಡಿತರ ವ್ಯವಸ್ಥೆಯ ಸುತ್ತ ನಡೆಯುವ ಕಥಾಹಂದರವನ್ನು ಹೊಂದಿರುವ ಚಿತ್ರ. ಗ್ರಾಮೀಣ ಭಾಗದಲ್ಲಿ ಪಡಿತರ ವಿತರಣೆಯಲ್ಲಿ ನಡೆಯುವ ಆಗು-ಹೋಗುಗಳ ಸುತ್ತ ಇಡೀ ಚಿತ್ರದ ಕಥೆ ಸಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿ, ಸಿನಿಪ್ರಿಯರ ಮನ-ಗಮನ ಸೆಳೆದಿದ್ದ ನಟಿ ರಾಗಿಣಿ ದ್ವಿವೇದಿ, ಇದೇ ಮೊದಲ ಬಾರಿಗೆ ಹಳ್ಳಿಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಕಂ ರಾಜಕಾರಣಿ ಕುಮಾರ ಬಂಗಾರಪ್ಪ, ದೊಡ್ಡಣ್ಣ ಮೊದಲಾದವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಚಿತ್ರೀಕರಣ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕಿ ರಾಗಿಣಿ, ‘ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಮೊದಲ ಬಾರಿಗೆ ಈ ಸಿನಿಮಾದಲ್ಲಿ ಗ್ರಾಮೀಣ ಭಾಗದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಳ್ಳಿ ಹುಡುಗಿಯೊಬ್ಬಳು ತನ್ನ ಊರಿನ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ನಡೆಯುವ ಭ್ರಷ್ಟ ವ್ಯವಸ್ಥೆಯ ವಿರುದ್ದ ಹೇಗೆ ಹೋರಾಡುತ್ತಾಳೆ ಎಂಬುದೇ ನನ್ನ ಪಾತ್ರ. ಮಂಡ್ಯ ಜಿಲ್ಲೆಯ ಹಳ್ಳಿಯ ಪರಿಸರದಲ್ಲಿ ಇಡೀ ಸಿನಿಮಾ ಮೂಡಿಬರುತ್ತಿದೆ. ಸಿನಿಮಾ ತುಂಬ ಚೆನ್ನಾಗಿ ಬರುತ್ತಿದೆ, ಗ್ರಾಮೀಣ ಜನರಿಗೆ ಖಂಡಿತವಾಗಿಯೂ ಈ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರೀಕರಣದ ನಡೆದುಕೊಂಡು ಬಂದ ಬಗ್ಗೆ ಮಾತನಾಡಿದ ನಾಯಕ ನಟ ಕುಮಾರ ಬಂಗಾರಪ್ಪ, ‘ಹಳ್ಳಿಯ ಜನರಿಗೆ ಹತ್ತಿರವಾಗುವಂಥ ಕಥೆ ಈ ಸಿನಿಮಾದಲ್ಲಿದೆ. ಪಡಿತರ ವ್ಯವಸ್ಥೆಯ ಲೋಪಗಳನ್ನು ಬಹುತೇಕ ಜನಸಾಮಾನ್ಯರು ಅನುಭವಿಸಿರುತ್ತಾರೆ. ಅಂಥ ಎಲ್ಲಾ ಜನರಿಗೂ ಈ ಸಿನಿಮಾ ಮನ ಮುಟ್ಟುತ್ತದೆ. ಬಹು ಸಮಯದ ನಂತರ ನಾನು ಈ ಸಿನಿಮಾದಲ್ಲಿ ಹಳ್ಳಿಯ ಜನಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ತೆರೆಮೇಲೆ ಬರುತ್ತದೆ ಎಂಬ ವಿಶ್ವಾಸವಿದೆ. ಆಹಾರ ಭದ್ರತೆಯ ಮೇಲೆ ಮಾಡಿರುವ ಈ ಸಿನಿಮಾದಲ್ಲಿ ಒಂದು ಸಂದೇಶವಿದೆ. ಚಿತ್ರೀಕರಣ ಮರೆಯಲಾರದ ಅನುಭವಗಳನ್ನು ಕೊಟ್ಟಿದೆ’ ಎಂದು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಈ ಹಿಂದೆ ‘ತಾಯವ್ವ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ ಪವನ ಕುಮಾರ್, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ‘ಜಯಶಂಕರ ಟಾಕೀಸ್’ ಬ್ಯಾನರಿನಲ್ಲಿ ಶ್ರೀಮತಿ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಿ. ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಸುತ್ತಮುತ್ತ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ರಾಜಕಾರಣಿ ಶಿವರಾಮೇಗೌಡ ಕೂಡ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸತೀಶ್, ನಿರ್ಮಾಪಕ ಭಾ. ಮ. ಹರೀಶ್, ಭಾ. ಮ. ಗಿರೀಶ್, ಚೆಲುವ ಮೂರ್ತಿ ಸೇರಿದಂತೆ ಅನೇಕರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ವೇಳೆ ಹಾಜರಿದ್ದರು.

ಸದ್ಯ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಬಾಕಿಯಿರುವ ಅಂತಿಮ ಹಂತದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.


Spread the love

Leave a Reply

Your email address will not be published. Required fields are marked *