26 ಗಂಟೆ ಮೊದಲೇ ಹೈಕಮಾಂಡ್, ಸಿಡಿ ಬಿಡುಗಡೆ ಬಗ್ಗೆ ಹೇಳಿತ್ತು- ರಮೇಶ ಜಾರಕಿಹೊಳಿ…!

ಬೆಂಗಳೂರು: ಸಿಡಿ ಹೊರಬಂದ ಹಲವು ದಿನಗಳ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನ ತಮ್ಮ ಸದಾಶಿವ ನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಿಡಿ ಪ್ರಕರಣದ ಮಾಹಿತಿಯನ್ನ ನೀಡಿದ್ದು, ಅವರು ಮಾತನಾಡಿದ ಸಫೂರ್ಣ ವಿವರ ಇಲ್ಲಿದೆ ನೋಡಿ..

ಅದು ನೂರಕ್ಕೆ ನೂರು ನಕಲಿ ಸಿಡಿ…
ನನ್ನ ಪರವಾಗಿ ನಿಂತು ಮಾನಸಿಕವಾಗಿ ಧೈರ್ಯ ತುಂಬಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಕುಮಾರಸ್ವಾಮಿ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು. ಈ ಹೊತ್ತಿನಲ್ಲಿ ನನ್ನ ಜೊತೆ ನಿಂತ ಎಲ್ಲರಿಗೂ ವಂದನೆಗಳು. ಆ ಸಿಡಿ ನೂರಕ್ಕೆ ನೂರು ನಕಲಿ. ನಾನು ಅಪರಾಧಿಯಲ್ಲ. ಅಪರಾಧ ಎಸಗಿಲ್ಲ.
ಸಿಡಿಯಲ್ಲಿರುವುದು ನಾನಲ್ಲ…
ಅದು ನೂರಕ್ಕೆ ನೂರು ನಕಲಿ ಸಿಡಿ. ಸಿಡಿಯಲ್ಲಿರುವುದು ನಾನಲ್ಲ. ನನ್ನ ವಿರುದ್ಧ ಪಕ್ಕಾ ಷಡ್ಯಂತ್ರ ಮಾಡಲಾಗಿದೆ.
ಸಿಡಿ ಬಗ್ಗೆ ನಾಲ್ಕು ತಿಂಗಳು ಮೊದಲೇ ಗೊತ್ತಿತ್ತು…
ಆ ಸಿಡಿ ಬಗ್ಗೆ ನಾಲ್ಕು ತಿಂಗಳು ಮೊದಲೇ ನನಗೆ ಮಾಹಿತಿ ಇತ್ತು. ಸಿಡಿ ಬಿಡುಗಡೆಗೆ 26 ಗಂಟೆ ಮೊದಲು ಹೈಕಮಾಂಡ್ ನನಗೆ ಸಿಡಿ ಬಿಡುಗಡೆಯ ಮಾಹಿತಿ ನೀಡಿತ್ತು. ಧೈರ್ಯದಿಂದ ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ನಾನು ಹೋಗಿರಲಿಲ್ಲ. ಯಾವುದಕ್ಕೂ ಹೆದರಿರಲಿಲ್ಲ. ನಾನು ಬಹಳ ದುಃಖದಲ್ಲಿದ್ದೇನೆ. ದಯವಿಟ್ಟು ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು..
ರಾಜೀನಾಮೆ ನನ್ನ ವೈಯುಕ್ತಿಕ ನಿರ್ಧಾರ…
ಕಳೆದ ನಾಲ್ಕೈದು ದಿನಗಳಿಂದ ನಾನು ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. 2020 ಫೆಬ್ರವರಿಯಲ್ಲಿ ನಾನು ಸಚಿವನಾದೆ. ಸಿಡಿ ಪ್ರಕರಣದ ಬಳಿಕ ರಾಜೀನಾಮೆ ನೀಡಿದ್ದೇನೆ. ಇದು ನನ್ನ ವೈಯುಕ್ತಿಕ ನಿರ್ಧಾರ. ರಾಜೀನಾಮೆ ಕೊಟ್ಟು ನೇರ ಊರಿಗೆ ನಡೆದಿದ್ದೆ. ನಂತರ ನಡೆದ ಬೆಳವಣಿಗೆಗಳ ಬಗ್ಗೆ ನನಗೆ ತಿಳಿದಿಲ್ಲ.
ಅವರನ್ನು ಜೈಲಿಗೆ ಹಾಕದೇ ಸುಮ್ಮನಿರಲ್ಲ…
ಒಬ್ಬ ಮಹಾನ್ ನಾಯಕನಿಂದ ಇವೆಲ್ಲಾ ಆಗಿದೆ. ಅವರ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ. ಅವೆಲ್ಲಾ ಸದ್ಯ ಸೂಕ್ಷ್ಮ ವಿಚಾರ. ಇದರಲ್ಲಿ ರಾಜಕೀಯ ಮಾಡಬಾರದು. ಒಂದಂತೂ ನಿಜ ಅವರನ್ನು ಜೈಲಿಗೆ ಹಾಕದೇ ಬಿಡಲ್ಲ. ಎಲ್ಲಾ ವಿಷಯಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ.
ಹುಳಿಮಾವು, ಯಶವಂತಪುರದಲ್ಲಿ ಷಡ್ಯಂತ್ರ…
ಬೆಂಗಳೂರಿನ 2 ಕಡೆ ನನ್ನ ವಿರುದ್ದ ಷಡ್ಯಂತ್ರ ನಡೆದಿತ್ತು. ಹುಳಿಮಾವು, ಯಶವಂತಪುರ ಸೇರಿ ಬೆಂಗಳೂರಿನ 2 ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿತ್ತು. ಯಶವಂತಪುರದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ನನ್ನ ವಿರುದ್ದ ಸ್ಕೆಚ್ ಹಾಕಿದ್ರು. ಸುಮ್ಮನಿರುವವನು ನಾನಲ್ಲ. ಜೈಲಿಗೆ ಹಾಕಿಯೇ ತೀರುತ್ತೇನೆ.
ಸಿಡಿಯಲ್ಲಿರುವ ಯುವತಿಗೆ 5 ಕೋಟಿ…
ಸಿಡಿಯಲ್ಲಿದ್ದ ಯುವತಿಗೆ 50 ಲಕ್ಷ ಅಲ್ಲ, 5 ಕೋಟಿ ನೀಡಿರುವ ಮಾಹಿತಿ ಇದೆ. ಇದರ ವಿರುದ್ಧ ನಾನೇಕೇ ದೂರು ನೀಡಲಿ.? ಆರೋಪವನ್ನು ಧೈರ್ಯವಾಗಿ ಎದುರಿಸುತ್ತೇನೆ. ನನಗೆ ಖಾತೆ ಬೇಕು ಎಂದು ಕೇಳಲ್ಲ. ಕುಟುಂಬದ ಗೌರವ ನನಗೆ ಬಹಳ ಮುಖ್ಯ.