ಗುಂಡಿ ಬಿದ್ದ ರಸ್ತೆಗಳೇ ರಜತ್ ಉಳ್ಳಾಗಡ್ಡಿಮಠ ಅಸ್ತ್ರ ; ವೈರಲ್ ಆದ ರೋಡ್ ಚಾಲೆಂಜ್.. !

ಹುಬ್ಬಳ್ಳಿ: ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಕಪಲ್ ಚಾಲೆಂಜ್, ಸ್ಮೈಲ್ ಚಾಲೆಂಜ್ ಹೀಗೆ ವಿವಿಧ ರೀತಿಯ ಚಾಲೆಂಜ್‌ಗಳು ಸದ್ದು ಮಾಡುತ್ತಿವೆ. ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮಾತ್ರ ವಿಭಿನ್ನ ರೀತಿಯ ಚಾಲೆಂಜ್ ಆರಂಭಿಸಿದ್ದಾರೆ. ಗುಂಡಿ ಬಿದ್ದ ಹುಬ್ಬಳ್ಳಿ ರಸ್ತೆಗಳ ಫೋಟೊಗಳನ್ನು ಷೇರ್ ಮಾಡುತ್ತಿದ್ದು ರಜತ್ ಉಳ್ಳಾಗಡ್ಡಿಮಠ ಕರೆಗೆ ಹುಬ್ಬಳ್ಳಿ -ಧಾರವಾಡ ಜನತೆ ಓಗೊಟ್ಟು ಸ್ಪಂದಿಸಿದ್ದಾರೆ.
ಉತ್ತರ ಕರ್ನಾಟಕದ ಹೆಬ್ಬಾಗಿಲೆಂದು ಮತ್ತು ವಾಣಿಜ್ಯ ವಹಿವಾಟಿಗೆ ಖ್ಯಾತಿ ಪಡೆದಿರುವ ಹುಬ್ಬಳ್ಳಿ ನಗರದ ರಸ್ತೆಗಳ ಪರಿಸ್ಥಿತಿ ಹೇಳತೀರದು. ಸುತ್ತಮುತ್ತಲಿನ ಕಲಘಟಗಿ, ನವಲಗುಂದ ,ಕುಂದಗೋಳ ತಾಲೂಕುಗಳು ಹುಬ್ಬಳ್ಳಿಯ ಮೇಲೆ ಅವಲಂಬಿತವಾಗಿದೆ. ರಸ್ತೆಗಳಲ್ಲಿನ ಗುಂಡಿಗಳಿಂದ ಅಪಘಾತಗಳಾಗಿರುವ ಉದಾಹರಣೆಗಳು ಕಣ್ಣ ಮುಂದೆ ಇವೆ. ಆದರೂ ಇದಕ್ಕೆ ಸ್ಪಂದಿಸದೆ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಂತಿದ್ದಾರೆ.
ರಜತ್ ಉಳ್ಳಾಗಡ್ಡಿಮಠ ಮ್ಮ ಫೇಸ್ ಬುಕ್‌ನಲ್ಲಿ ಹಾಳಾಗಿರುವ ರಸ್ತೆಗಳ ಪೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದು , ಮಾಜಿ ಮುಖ್ಯಮಂತ್ರಿ ಹಾಲಿ ಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಹುಬ್ಬಳ್ಳಿಯ ವಿವಿಧ ಕಡೆಗಳ ರಸ್ತೆಯ ಚಿತ್ರಗಳನ್ನು ತೆಗೆದು #HubballiRoadChallenge ಎಂಬ ಹೆಸರಿನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ರಸ್ತೆಗಳು ತುಂಬಾ ಹದಗೆಟ್ಟಿವೆ. ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸೋದು ಹೇಗೆ? ಈ ರಸ್ತೆಗಳನ್ನು ರಿಪೇರಿ ಮಾಡಿಸಿ ಎಂದು ಆಗ್ರಹಿಸಿದ್ದಾರೆ.
ರಜತ್ ಉಳ್ಳಾಗಡ್ಡಿಮಠ ಅವರು ಕೆಪಿಸಿಸಿ ಸಂಯೋಜಕರಾಗಿದ್ದು , ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರಾಗಿದ್ದಾರೆ.