ಬಸವನಾಡಿನಲ್ಲಿ ಸಿಡಿಲಿಗೆ ತಾಯಿ ಮಗಳು ಬಲಿ- ಯಜಮಾನ ಪಾರು
ವಿಜಯಪುರ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಂದೂ ಕೂಡಾ ಮುಂದುವರೆದಿದ್ದು, ಇಂದು ಮಳೆಯ ಜೊತೆಗೆ ಸಿಡಿಲಿನಾಟವೂ ಮುಂದುವರೆದಿದ್ದು, ಸಿಡಿಲಿಗೆ ತಾಯಿ-ಮಗಳು ಬಲಿಯಾದ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ.
ಹೊಲಕ್ಕೆ ಹೋದಾಗ ರಭಸವಾಗಿ ಮಳೆ ಬರುತ್ತಿರುವುದರಿಂದ ಮರದ ಕೆಳಗೆ ತಾಯಿ-ಮಗಳು ನಿಂತಿದ್ದಾರೆ. ಸ್ವಲ್ಪ ದೂರದಲ್ಲೇ ತಂದೆ ನಿಂತಾಗ ಸಿಡಿಲು ಬಡಿದಿದೆ. ಘಟನೆಯಲ್ಲಿ ತಾಯಿ ಮಹಾದೇವಿ ಭಜಂತ್ರಿ (43) ಹಾಗೂ ಮಗಳು ಸೋನಿ ಭಜಂತ್ರಿ (12) ಅಸುನೀಗಿದ್ದಾರೆ. ಸ್ವಲ್ಪ ಸಮೀಪದರಲ್ಲೇ ಇದ್ದ ತಂದೆ ಯಂಕಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಫಸಲು ಕೈಗೆ ಬರುವ ಸಮಯವಾಗಿದ್ದರಿಂದ ಬೆಳಿಗ್ಗೆ ಬೇಗನೇ ಮಗಳೊಂದಿಗೆ ತಾಯಿ ಮಹದೇವಿ ಹೊಲಕ್ಕೆ ಹೋಗಿದ್ದಳು. ಊಟ ಮಾಡುವ ಸಮಯದ ಮುನ್ನವೇ ಮಳೆ ಆರಂಭವಾಗಿದ್ದರಿಂದ ಮಗಳ ಸಮೇತ ಮರದ ಕೆಳಗೆ ಆಸರೆ ಪಡೆದಿದ್ದಳು.
ಮರದ ಆಸರೆಯೇ ಇಬ್ಬರಿಗೂ ಮಾರಕವಾಗಿದ್ದು, ಸಿಡಿಲಿನ ಅಬ್ಬರಕ್ಕೆ ಇಬ್ಬರೂ ಸ್ಥಳದಲ್ಲೇ ಪ್ರಾಣವನ್ನ ಬಿಟ್ಟಿದ್ದಾರೆ. ಪ್ರಕರಣ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತಾಯಿ ಮಗಳ ಶವವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.