ಶ್ರೀಮಂತರ ಹಾವಳಿಯಿಂದ ಬಡವರು ಬೀದಿ ಪಾಲು: ಕರ್ನಾಟಕದಲ್ಲೂ ನಡೆಯುತ್ತಿದೆ ಹಣವಂತರ ಹಾವಳಿ

ರಾಯಚೂರು: ಸಿಂಧನೂರು ತಾಲ್ಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ಅಮಾಯಕ ಬಡವರ ಮನೆ ಮೇಲೆ ಅಲ್ಲಿನ ಕೆಲ ಪ್ರಭಾವಿಗಳು ದಾಳಿ ನಡೆಸಿ, ಗುಡಿಸಲು ಕಿತ್ತು ಹಾಕಿ ಬಡ ಕುಟುಂಬವನ್ನ ಬೀದಿ ಪಾಲು ಮಾಡಿರುವ ಘಟನೆ ತಡವಾಗಿ ಬಂದಿದೆ.
ಮಧ್ಯಪ್ರದೇಶದಲ್ಲಿದೆ ರೈತರ ಕುಟುಂಬದ ಮೇಲೆ ನಡೆದ ಹಲ್ಲೆ ದೇಶಾಧ್ಯಂತ ವೈರಲ್ ಆಗಿರುವುದನ್ನ ಮೀರಿಸುವಂತ ವರದಿಯಿದು.
ಯದ್ದಲದೊಡ್ಡಿಯ ಬಸವಣ್ಣ ದೇವಸ್ಥಾನದ ಹತ್ತಿರದ ಸೀತಾರಾಮ ಪಾತ್ರದವರು ಎನ್ನುವವವರ ಮನೆಯ ಮೇಲೆ ಅದೇ ಗ್ರಾಮದ ರಾಮೇಶ ಯಂಕೋಬ, ಶಾಂತಪ್ಪ ವೆಂಕೋಬ, ಚೆನ್ನಬಸವ ತಂದೆ ಶೇಷಪ್ಪ ಹಾಗೂ ಗ್ಯಾನಪ್ಪ ತಂದೆ ಸಿದ್ದಪ್ಪ ಎನ್ನುವವರು ಭಾನುವಾರ ಏಕಾಏಕಿ ದಾಳಿ ನಡೆಸಿದ್ದಾರೆ.
ಜಾಗದ ವಿಚಾರವಾಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಸೀತಾರಾಮ ವಾಸವಿದ್ದ ಗುಡಿಸಲನ್ನು ಕಿತ್ತು ಹಾಕಿದ್ದರಿಂದ ಗುಡಿಸಲಿನಲ್ಲಿ ವಾಸವಿದ್ದ ಮನೆಯ ನಿವಾಸಿಗಳು ಬೀದಿ ಪಾಲಾಗಿದ್ದಾರೆ.
ಹಿಂದೇಟು
ಈ ಕುರಿತು ಸೀತಾರಾಮ ಹಾಗೂ ಯದ್ದಲದೊಡ್ಡಿಯ ಕೆಲ ಗ್ರಾಮಸ್ಥರು ಬಳಗಾನೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ, ಅಲ್ಲಿನ ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಳ್ಳದೇ ಹಿಂದೇಟು ಹಾಕುತ್ತಿದ್ದಾರೆ ಎಂದು ಸೀತಾರಾಮ ತಿಳಿಸಿದ್ದಾರೆ.
ಪ್ರಭಾವ
ಈ ವಿಷಯದ ಕುರಿತಂತೆ ಕೆಲ ರಾಜಕೀಯ ಮುಖಂಡರು ತಮ್ಮ ಪ್ರಭಾವ ಬಳಸಿದ್ದು, ಅಮಾಯಕ ಸೀತಾರಾಮನವರ ಬಡ ಕುಟುಂಬ ಬೀದಿಪಾಲಾಗಿದೆ.
ಕೂಡಲೇ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಬಳಗಾನೂರು ಪೊಲೀಸ್ ಠಾಣೆಯ ಪಿಎಸ್ಐ ಅವರಿಗೆ ಸೂಚನೆ ನೀಡಲಾಗುವುದು. ಅನ್ಯಾಯಕ್ಕೊಳಗಾದ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಸಿಪಿಐ ಬಾಲಚಂದ್ರ ಲಕ್ಕಂ ಹೇಳಿದ್ದಾರೆ.